ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ ಅವರು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಗಾಗಿ ನಾನು ಭಕಪಕ್ಷಿಯಂತೆ ಕಾಯುತ್ತಿದ್ದು, ಹೆಸರು ಘೋಷಣೆ ಮಾಡಿದ ಕೂಡಲೇ ನಾಮಪತ್ರ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಭಿಮಾನಿಗಳು ಸ್ವಾಭಿಮಾನಿ ಸೈನಿಕನ ಸ್ಪರ್ಧೆ ಖಚಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕೆಂದರೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕಿದೆ. ಈ ಭಾಗದಲ್ಲಿ ಬಿಜೆಪಿಗೆ ನಾನೇ ಸೀನಿಯರ್. ಕುಮಾರಸ್ವಾಮಿ ಕೂಡಾ ಪ್ರಜ್ಞಾವಂತರಿದ್ದಾರೆ. ಕಾದುನೋಡಿ ಎಲ್ಲರನ್ನೂ ಸಮಾಧಾನ ಮಾಡಿ ನನಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಬೆಂಬಲದಿಂದ ದೇವೇಗೌಡರ ಕುಟುಂಬ ನನ್ನ ವಿರುದ್ಧ ನಿಂತಿತ್ತು. ಈ ಬಾರಿ ನನ್ನ ಬೆಂಬಲಿಗರು ನನ್ನನ್ನು ಸ್ವತಂತ್ರ ಶಾಸಕನನ್ನಾಗಿ ಮಾಡಬೇಕೆಂದು ನಿರ್ಧರಿಸಿದ್ದಾರೆ. ರಾಜಕೀಯ ಪಕ್ಷಗಳು ನನ್ನನ್ನು ಕೈಬಿಟ್ಟರೂ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ಬಯಸಿದ್ದು, ಯೋಗೇಶ್ವರ್ ಅವರಿಗೆ ಸ್ಥಾನ ಬಿಟ್ಟುಕೊಡುತ್ತಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು. ‘ನನಗಿರುವ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ಮುಖಂಡರು ನನ್ನ ಹೆಸರನ್ನು ಅಂತಿಮಗೊಳಿಸುತ್ತಾರೆ. ನನಗೆ ಪಕ್ಷದ ವರಿಷ್ಠರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಹಾಗಾಗಿ ನಾನು ಚುನಾವಣಾ ಕಣದಲ್ಲಿರುತ್ತೇನೆ’ ಎಂದು ಹೇಳಿದ್ದಾರೆ.