ಕಳೆದ 3 ವರ್ಷಗಳಲ್ಲಿ ಭಾರತದಾದ್ಯಂತ ಸಾವಿರಾರು ಬಾಲ್ಯವಿವಾಹಗಳು ನಡೆದಿವೆ. ತಮಿಳುನಾಡು- 8966, ಕರ್ನಾಟಕ-8348, ಪಶ್ಚಿಮಬಂಗಾಳ- 8324, ತೆಲಂಗಾಣ- 4440, ಆಂಧ್ರಪ್ರದೇಶ-3416 ಬಾಲ್ಯ ವಿವಾಹ ನಡೆದ ಟಾಪ್ 5 ರಾಜ್ಯಗಳಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ಗೆ ನೀಡಿದೆ.
ಬಾಲ್ಯವಿವಾಹಗಳನ್ನು ನಿಯಂತ್ರಿಸಲು ಸುಪ್ರೀಂಕೋರ್ಟ್ ಮಾರ್ಗಸೂಚಿ ಹೊರಡಿಸಬೇಕು ಎಂದು ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕಳೆದ 3 ವರ್ಷ ಗಳಲ್ಲಿ ಬಾಲ್ಯ ವಿವಾಹದ ಘಟನೆಗಳ ಬಗ್ಗೆ ಬೆಚ್ಚಿಬೀಳಿಸುವ ಅಂಕಿಅಂಶಗಳನ್ನು ಮಂಡಿಸಿತು.
ಈ ಸಾಮಾಜಿಕ ಅನಿಷ್ಟದ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಬಲಪಡಿಸಲು ನಾವು ಯಾವ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ನೀಡಬಹುದು ಎಂಬ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿ ತೀರ್ಪು ಕಾಯ್ದಿರಿಸಿತು.