ರಸ್ತೆ ಪಕ್ಕದಲ್ಲಿನ ತೆರೆದ ಚರಂಡಿ ಗುಂಡಿಗಳನ್ನು ಮುಚ್ಚುವುದು ಅಥವಾ ಚರಂಡಿ ದುರಸ್ತಿಯ ಸಮಯದಲ್ಲಿ ಬ್ಯಾರಿಕೇಡ್ ಇಲ್ಲವೇ ಎಚ್ಚರಿಕೆಯ ಫಲಕವನ್ನು ಅಳವಡಿಸಿವುದು ಅಧಿಕಾರಿಗಳ ಕರ್ತವ್ಯ. ಹೀಗೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೆ ಚರಂಡಿ ಗುಂಡಿಗಳಿಗೆ ಬಿದ್ದು ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಗಾಲದಲ್ಲಂತೂ ಈ ಸಮಸ್ಯೆ ತೀರಾ ಹೆಚ್ಚಿರುತ್ತದೆ. ಹೌದು ಮಳೆ ನೀರಿಗೆ ರಸ್ತೆ ಕಾಣದೆ ಕೆಲವೊಬ್ಬರು ಸೀದಾ ಚರಂಡಿ ಗುಂಡಿಗೆ ಕಾಲಿಟ್ಟು ಬಿಡುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆಯೂ ನಡೆದಿದ್ದು, ಆಕಡೆಯಿಂದ ರಸ್ತೆ ದಾಟಿ ಈ ಕಡೆ ಬರುತ್ತಿದ್ದ ಮೂವರು ಮಹಿಳೆಯರು ಭಾರೀ ಮಳೆಗೆ ರಸ್ತೆ ಕಾಣದೆ ಮಗುವಿನ ಸಮೇತ ಆ ಮೂವರು ದೊಪ್ಪನೆ ತೆರೆದ ಚರಂಡಿ ಹೊಂಡಕ್ಕೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರ ಸಹಾಯಕ್ಕೆ ಧಾವಿಸಿ ಮಗು ಮತ್ತು ಆ ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಸಂಜೆ ತಮಿಳುನಾಡಿನ ಸತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಮಳೆ ನೀರು ರಸ್ತೆ ಪೂರ್ತಿ ತುಂಬಿದ್ದರಿಂದ ರಸ್ತೆ ಕಾಣದೆ ಮೂವರು ಮಹಿಳೆಯರು ಮಗುವಿನ ಸಮೇತ ತೆರೆದ ಚರಂಡಿ ಗುಂಡಿಗೆ ಬಿದ್ದಿದ್ದಾರೆ. ಚರಂಡಿ ನಿರ್ಮಾಣಕ್ಕಾಗಿ ರಾಜ್ಯ ಹೆದ್ದಾರಿ ಇಲಾಖೆಯು ರಸ್ತೆ ಪಕ್ಕ ಸುಮಾರು ಮೂರು ಅಡಿ ಆಳದ ಕಂದಕವನ್ನು ಅಗೆದಿತ್ತು. ಆದರೆ ಅಲ್ಲಿ ಯಾವುದೇ ರೀತಿಯ ಬ್ಯಾರಿಕೇಡ್ ಅಥವಾ ಇನ್ನಾವುದೇ ಎಚ್ಚರಿಕೆ ಫಲಕವನ್ನು ಆಳವಡಿಸಿರಲಿಲ್ಲ. ಇದರಿಂದ ರಸ್ತೆ ದಾಟುವಾಗ ಮಳೆ ನೀರಿಗೆ ರಸ್ತೆ ಕಾಣದೆ ಮಹಿಳೆಯರು ಚರಂಡಿ ಗುಂಡಿಗೆ ಬಿದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಅದೃಷ್ಟವಶಾತ್ ಈ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಅಲ್ಲಿದ್ದ ಅಂಗಡಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಸುಂದರ್ ಸುಬ್ಬಯ್ಯ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಮೂವರು ಮಹಿಳೆಯರು ಅತ್ತ ಕಡೆಯಿಂದ ಇತ್ತ ಕಡೆ ಬರಲು ರಸ್ತೆ ದಾಟುತ್ತಿರುವ ದೃಶ್ಯವನ್ನು ಕಾಣಬಹುದು. ಭಾರೀ ಮಳೆಯ ಕಾರಣ ರಸ್ತೆ ತುಂಬೆಲ್ಲಾ ನೀರು ತುಂಬಿದ್ದರಿಂದ ಸರಿಯಾಗಿ ರಸ್ತೆ ಕಾಣದೆ ಆ ಮೂವರು ಮಗುವಿನ ಸಮೇತ ಚರಂಡಿ ಗುಂಡಿಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಓಡಿ ಹೋಗಿ ಆ ನಾಲ್ಕು ಜನರನ್ನು ರಕ್ಷಣೆ ಮಾಡಿದ್ದಾರೆ.