ಒಂದೆಡೆ ಮುಡಾ ಹಗರಣ ತನಿಖೆ, ಇನ್ನೊಂದೆಡೆ ಕೈ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಸಭೆ ನಡೆದಿರುವ ಬೆನ್ನಲ್ಲೇ ಎಲ್ಲ ಸಂಕಷ್ಟಗಳಿಂದ ಪಾರು ಮಾಡುವಂತೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಿ ಮೊರೆ ಹೋಗಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳ ಎಫ್ಐಆರ್ ದಾಖಲಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಎ-1 ಆರೋಪಿಯಾಗಿದ್ದು, ಅವರ ಪತ್ನಿ ಪಾರ್ವತಿ ಅವರನ್ನು ಎ-2 ಮಾಡಲಾಗಿದೆ. ಸದ್ಯ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಸಾಕ್ಷ್ಯಗಳನ್ನು ಕಲೆ ಹಾಕಲು ಮುಂದಾಗಿದೆ.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲೂ ದೇವಿಗೆ ಪೂಜೆ ಸಲ್ಲಿಸಿದ್ರು. ತಮ್ಮ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅರ್ಚನೆ ಮಾಡಿಸಿದ್ದಾರೆ. ಸಿಎಂ ಪತ್ನಿ ಪಾರ್ವತಿಯವರ ಹೆಸರಿನಲ್ಲಿ ಧನಿಷ್ಠಾ ನಕ್ಷತ್ರ ನಾಮಧೇಯ ಪಾರ್ವತಿ ಎಂದು ಅರ್ಚಕರಿಗೆ ತಿಳಿಸಿ, ಪತ್ನಿ ಪರವಾಗಿ ವಿಶೇಷ ಪೂಜೆ ಸಲ್ಲಿಸಿದ್ರು.ಯಲ್ಲಮ್ಮ ದೇವಿಗೆ ಆರತಿ ಆಗುವವರೆಗೂ ದೇವ ಸನ್ನಿಧಾನದಲ್ಲಿಯೇ ನಿಂತು ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯನವರು ತಾವೇ ಕುಂಕುಮ ಹಚ್ಚಿಕೊಂಡಿದ್ದಾರೆ. ಬಳಿಕ ಆರತಿ ತಟ್ಟೆಗೆ 500 ರೂಪಾಯಿ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಸಂಬಳ ಹೆಚ್ಚಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುವುದಾಗಿ ತಿಳಸಿದ್ದಾರೆ