ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ಗೆ ಇಂದು (ಡಿಸೆಂಬರ್ 13) ಕರ್ನಾಟಕ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ದರ್ಶನ್ ಜೊತೆಗೆ ಪವಿತ್ರಾ ಗೌಡ, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ಪ್ರದೋಶ್, ಜಗದೀಶ್ ಅವರುಗಳಿಗೆ ಜಾಮೀನು ನೀಡಿದ್ದಾರೆ. ಜುಲೈ 11 ರಂದು ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಒಂದು ತಿಂಗಳ ಹಿಂದೆ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಇದೀಗ ನಿಯಮಿತ ಜಾಮೀನೆ ಅವರಿಗೆ ದೊರೆತಿದೆ. ಆ ಮೂಲಕ ಪ್ರಕರಣದಲ್ಲಿ ತುಸು ನಿರಾಳತೆ ಒದಗಿದೆ. ದರ್ಶನ್ಗೆ ಜಾಮೀನು ದೊರೆಯುತ್ತಿದ್ದಂತೆ ಅಭಿಮಾನಿಗಳು ಸಂಭ್ರಮ ಆರಂಭಿಸಿದ್ದಾರೆ.
ಹೊಸ ವರ್ಷ ಜನವರಿ ಒಂದಲ್ಲ ಸರ್ ನಮಗೆ ಇಂದೇ ಹೊಸ ವರ್ಷ ಎಂದು ಹೇಳಿದ್ದಾರೆ.ದರ್ಶನ್ ದಾಖಲಾಗಿರುವ ಬಿಜಿಎಸ್ ಆಸ್ಪತ್ರೆಯ ಮುಂದೆ ಹಾಗೂ ರಾಜರಾಜೇಶ್ವರಿಯಲ್ಲಿರುವ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಆಸ್ಪತ್ರೆಯ ಮುಂದೆ ನಿಲ್ಲಬೇಡಿ ಎಂದು ಪೊಲೀಸರು ಅಭಿಮಾನಿಗಳನ್ನು ಚದುರಿಸಿದ್ದಾರೆ.
ಇತ್ತ ರಾಜರಾಜೇಶ್ವರಿ ನಗರದಲ್ಲಿ ಅಭಿಮಾನಿಗಳು ದರ್ಶನ್ ನಿವಾಸ ತೂಗುದೀಪ ನಿಲಯದ ಬೋರ್ಡಿಗೆ ಹಾರ ಹಾಕಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿಯೂ ಕೂಡ ದರ್ಶನ್ ಅಭಿಮಾನಿಗಳು ಸಂಭ್ರಮ ಆಚರಿಸಿದ್ದಾರೆ. ಬಾಸ್.. ಬಾಸ್.. ಡಿಬಾಸ್, ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.