ಮಾಗಡಿ: ತಾಲ್ಲೂಕಿನ ಮಂಚನಬೆಲೆ ಜಲಾಶಯದ ಸಮೀಪ ಎರಡು ವರ್ಷಗಳ ಹಿಂದೆ ಭಾರೀ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆ ಪರ್ಯಾಯವಾಗಿ ನಿರ್ಮಿಸಿದ್ದ ಎರಡನೇ ತಾತ್ಕಾಲಿಕ ಸೇತುವೆ ಮಂಗಳವಾರ ಬಿರುಕು ಬಿಟ್ಟಿದೆ.ಅಪಾಯಕಾರಿ ಸೇತುವೆ ಮೇಲೆ ವಾಹನಗಳು ಸಂಚಾರ ಮಾಡುತ್ತಿವೆ.
ತಿಂಗಳ ಹಿಂದೆಯಷ್ಟೇ ಸುರಿದ ಮಳೆಯಿಂದಾಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿತ್ತು. ಆಗ ಮೊದಲಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿ, ಒಂದು ಭಾಗದ ಸಂಪರ್ಕವೇ ಕಡಿತಗೊಂಡಿತ್ತು. ಬಳಿಕ, ಮತ್ತೊಂದು ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ‘ಫೆಂಜಲ್’ ಚಂಡಮಾರುತದ ಪರಿಣಾಮದಿಂದಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಈಗಿನ ಸೇತುವೆಯೂ ಬಿರುಕು ಬಿಟ್ಟಿದ್ದು, ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಹಿಂದೆ ಕೊಚ್ಚಿ ಹೋಗಿದ್ದ ಸೇತುವೆಯ ಮರು ನಿರ್ಮಾಣ ಕಾರ್ಯ ಎರಡು ವರ್ಷಗಳಾದರೂ ಆರಂಭಗೊಂಡಿಲ್ಲ. ಅಧಿಕಾರಿಗಳು ಒಂದಿಲ್ಲೊಂದು ನೆಪ ಹೇಳುತ್ತಲೇ ಬರುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರು ಹಾಗೂ ಜಲಾಶಯಕ್ಕೆ ಬರುವ ಪ್ರವಾಸಿಗರು ಆತಂಕದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಿರುವ ಸೇತುವೆ ದಾಟಿಕೊಂಡು ಹೋಗಬೇಕಿದೆ. ದ್ವಿಚಕ್ರ ವಾಹನ, ಬಸ್ಸುಗಳು ಸೇರಿದಂತೆ ಹಲವು ಬಗೆಯ ವಾಹನಗಳು ಇಲ್ಲಿ ಓಡಾಡುತ್ತವೆ.
ಕುಸಿದಿದ್ದ ಭಾಗಗಳಿಗೆ ಜೆಸಿಬಿ ಯಂತ್ರದ ಮೂಲಕ ಮಣ್ಣು ಹಾಕಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಈ ಭಾಗದಲ್ಲಿ ಶಾಶ್ವತ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.