ನೆಲ್ಲಿಕಾಯಿ ಎಂದಾಕ್ಷಣ ನಮ್ಮ ಬಾಯಿಯಲ್ಲಿ ಹಾಗೇ ನೀರೂರುತ್ತದೆ. ಅಬ್ಬಾ.. ಎಂತಹ ಸ್ವೀಟ್, ಖಾರ ತಿಂದರೂ ಈ ನೆಲ್ಲಿಕಾಯಿಯಲ್ಲಿರುವ ಹುಳಿನೇ ಸಖತ್ ಮಜಾ ಕೊಡುತ್ತದೆ. ಎಲ್ಲಿಯಾದರೂ ಕಾಣಿಸಿದರೆ ಒಂದನ್ನಾದರೂ ತೆಗೆದುಕೊಂಡು ನಾಲಿಗೆ ಟಚ್ ಮಾಡಿದರೆ ಅವಾಗ ಮಾತ್ರ ಸಮಾಧಾನ ಆಗುವುದು. ನಾವು ನೆಲ್ಲಿಕಾಯಿ ಸುಮ್ಮನೆ ತಿಂದರೂ ಅದು ನಮ್ಮ ದೇಹ ಸೇರಿದ ಮೇಲೆ ಸಾಕಷ್ಟು ಸಹಾಯ ಮಾಡುತ್ತದೆ. ಅಂದರೆ ನಮ್ಮ ಆರೋಗ್ಯಕ್ಕೆ ನೆಲ್ಲಿಕಾಯಿಯಿಂದ ಹಲವಾರು ಉಪಯೋಗಗಳಿವೆ. ಅವುಗಳು ಏನು ಎಂಬುದು ಇಲ್ಲಿದೆ.
ನೆಲ್ಲಿಕಾಯಿ ಹಲವು ಪೋಷಕಾಂಶ, ಔಷಧೀಯ ಗುಣ ಹೊಂದಿದ್ದು ಮೊದಲು ಇದನ್ನು ನಾವು ಹಿತಮಿತವಾಗಿ ನಿತ್ಯ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ‘ಸಿ’ ಹೊಂದಿರುವಲ್ಲಿ ನೆಲ್ಲಿಕಾಯಿ ಶ್ರೀಮಂತವಾಗಿದೆ. ಹೀಗಾಗಿ ನಮ್ಮ ರೋಗನಿರೋಧಕ ಕಾರ್ಯ, ಚರ್ಮದ ಆರೋಗ್ಯ ಹಾಗೂ ಕಾಲಜನ್ ಉತ್ಪಾದನೆಗೆ ಪ್ರಮುಖವಾಗಿದೆ. ನೆಲ್ಲಿಕಾಯಿಯನ್ನ ಪ್ರತಿದಿನ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇದರ ಜೊತೆಗೆ ಚರ್ಮದ ಸ್ಥಿತಿಸ್ಥಾಪಕತ್ವಕ್ಕೆ ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಶುಂಠಿ ಹಾಗೂ ಜೇನುತುಪ್ಪದೊಂದಿಗೆ ನೆಲ್ಲಿಕಾಯಿಯನ್ನ ಸೇರಿಸಿ ಸೇವಿಸಿದಾಗ ನೋಯುತ್ತಿರುವ ಗಂಟಲು ಕಡಿಮೆ ಮಾಡುತ್ತದೆ. ಶೀತವಿದ್ದರೇ ಅದು ಕೂಡ ಮಾಯವಾಗುತ್ತದೆ.
ಈ ಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ ಚರ್ಮದ ಮೇಲಿರುವ ಕಪ್ಪು ಕಲೆಗಳು ಕಡಿಮೆ ಆಗುತ್ತವೆ. ದೇಹವನ್ನು ತಂಪಾಗಿಸುವುದರ ಜೊತೆಗೆ ಪ್ಯೂರಿಫೈಯರ್ (Purifier) ಮತ್ತು ಕ್ಲೆನ್ಸರ್ (Cleanser) ಆಗಿ ದೇಹದ ಒಳಗೆ ಕೆಲಸ ಮಾಡುತ್ತದೆ. ಇದರ ಸೇವನೆಯಿಂದ ಚರ್ಮದ ಕಾಂತಿ ಕೂಡ ಬರುತ್ತದೆ.
ಕೂದಲುಗಳಿಗೂ ನೆಲ್ಲಿಕಾಯಿ ಉತ್ತಮವಾದ ಔಷಧಿ ಆಗಿದೆ. ಇದರ ಜ್ಯೂಸ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅದು ಹೇಗೆಂದರೆ ದೇಹದ ಒಳಗೆ ಹೋದ ಮೇಲೆ ಇದರ ಅಂಶಗಳು ಒಣ ಕೂದಲನ್ನು (Dry Hair), ಸುಕ್ಕುಗಟ್ಟುವಿಕೆಯನ್ನು ಶಾಶ್ವತವಾಗಿ ತಡೆಗಟ್ಟುತ್ತವೆ. ಅಲ್ಲದೇ ತಲೆಯಲ್ಲಿರುವ ಡ್ಯಾಂಡ್ರಫ್ ಅಥವಾ ತಲೆಯಲ್ಲಿ ಹೊಟ್ಟು ಆಗುವುದನ್ನ ಸಂಪೂರ್ಣವಾಗಿ ತಡೆಯುತ್ತದೆ. ಹೀಗಾಗಿ ಈ ಎರಡು ಸಮಸ್ಯೆ ಇದ್ದವರು ನೆಲ್ಲಿಕಾಯಿಯನ್ನ ತಿನ್ನುತ್ತಿದ್ದರೆ ಕೂದಲಿಗೆ ಒಳ್ಳೆಯದು.
ನೆಲ್ಲಿಕಾಯಿ ಅಥವಾ ಇದನ್ನು ಜೂಸ್ ಮಾಡಿ ಕುಡಿಯುವುದರಿಂದ ಅಜೀರ್ಣ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಹೃದಯಕ್ಕೆ ಸಹಾಯ ಮಾಡುತ್ತದೆ. ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದರಿಂದ ಮಧುಮೇಹದಿಂದ ನಾವು ಮುಕ್ತರಾಗಬಹುದು. ಇದು ಮೆದುಳಿನ ಕಾರ್ಯವನ್ನ ಚೆನ್ನಾಗಿ ಇರುವಂತೆ ನೋಡಿಕೊಳ್ಳುತ್ತದೆ. ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.