ಹಣ ಅಂದ್ರೆ, ಹೆಣ ಕೂಡ ಬಾಯಿ ಬಿಡುತ್ತೆ. ಆದ್ರೆ, ಈ ವಿಷ್ಯವನ್ನು ದ್ರಾವಿಡ್, ಪದೇ ಪದೇ ಸುಳ್ಳಾಗಿಸುತ್ತಿದ್ದಾರೆ. ಹೆಡ್ ಕೋಚ್ ಹುದ್ದೆಗೆ ಆರ್ಆರ್ ನೀಡಿದ್ದ ಬ್ಲಾಂಕ್ ಚೆಕ್ ಅನ್ನೇ ತಿರಸ್ಕರಿಸಿದ್ದಾರೆ. ಆದ್ರೆ, ಇದರ ಹಿಂದೆ ಒಂದು ನಿಷ್ಠೆಯ ಕಥೆ ಇದೆ. ಅದೇನು?.
ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ದಿ ಗ್ರೇಟ್ ವಾಲ್. ಆಟಗಾರನಾಗಿ, ಕೋಚ್ ಆಗಿ ದ್ರಾವಿಡ್ ಟೀಮ್ ಇಂಡಿಯಾಗೆ ನೀಡಿದ ಕೊಡುಗೆ ನಿಜಕ್ಕೂ ಅಪಾರ. ಆದ್ರೆ, ಇದೇ ರಾಹುಲ್ ದ್ರಾವಿಡ್, ಈಗ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ, ಆರ್ಆರ್ ನೀಡಿರುವ ಬ್ಲಾಂಕ್ ಚೆಕ್ ಅನ್ನೇ ತಿರಸ್ಕರಿಸಿದ್ದಾರೆ. ಇದು ಸಹಜವಾಗೇ ರಾಜಸ್ಥಾನ ರಾಯಲ್ಸ್ ಅಂದ್ರೆ, ದ್ರಾವಿಡ್ಗೆ ಯಾಕಿಷ್ಟು ಪ್ರೀತಿ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ. ಆದ್ರೆ, ಇದಕ್ಕೆ ಕಾರಣ ಅಂದು ಆರ್ಸಿಬಿ ಮಾಡಿದ್ದ ತಪ್ಪು ಹಾಗೂ ಆರ್ಆರ್ ಮೇಲಿನ ನಿಷ್ಠೆ.
2008ರಲ್ಲಿ ದ್ರಾವಿಡ್ ಆರ್ಸಿಬಿ ನಾಯಕರಾಗಿದ್ದರು. ಆದ್ರೆ, ಮರು ವರ್ಷವೇ ತಂಡಕ್ಕೆ ಸರ್ಜರಿ ಮಾಡಿದ್ದ ಫ್ರಾಂಚೈಸಿ, ದ್ರಾವಿಡ್ರನ್ನ ನಾಯಕತ್ವದಿಂದ ಕೆಳಗಿಳಿಸಿತ್ತು. ಇದರ ಹೊರತಾಗಿಯೂ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ್ದ ದ್ರಾವಿಡ್ಗೆ ನಂತರ ಗೇಟ್ಪಾಸ್ ನೀಡಿ ಅಪಮಾನಿಸಿತ್ತು. ಈ ವೇಳೆ ಗೌರವದೊಂದಿಗೆ ಆಹ್ವಾನ ನೀಡಿದ ರಾಜಸ್ಥಾನ್ ರಾಯಲ್ಸ್ ನಾಯಕತ್ವದ ಪಟ್ಟ ನೀಡಿತು. ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದ ದ್ರಾವಿಡ್, 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನ ಪ್ಲೇ ಆಫ್ಗೇರಿಸಿದ್ದರು. ಅದೇ ವರ್ಷ ನಡೆದ ಚಾಂಪಿಯನ್ ಲೀಗ್ ಟಿ20 ಟೂರ್ನಿಯಲ್ಲಿ ಫೈನಲ್ಸ್ ತಲುಪಿಸಿದ್ರು. 2011ರಿಂದ 2013ರ ತನಕ ಕ್ರಮವಾಗಿ 343, 462, 471 ರನ್ ಗಳಿಸಿದ್ದ ದ್ರಾವಿಡ್, 2013ರಲ್ಲೇ ನಿವೃತ್ತಿ ಘೋಷಿಸಿ 2014, 2015ರಲ್ಲಿ ಆರ್ಆರ್ ತಂಡದ ಮಾರ್ಗದರ್ಶಕರಾಗಿದ್ದರು.
ನಂತರ ನಡೆದಿದ್ದೆಲ್ಲ ಇತಿಹಾಸ. ಆದ್ರೆ, ಇತಿಹಾಸ ಸೃಷ್ಟಿಸಿದ ದ್ರಾವಿಡ್, 9 ವರ್ಷಗಳ ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಡ್ ಕೋಚ್ ಆಗಿ ಮರಳಿದ್ದಾರೆ. ಇದಕ್ಕೆ ಕಾರಣ ಅಂದು ಯಾವೊಂದು ಫ್ರಾಂಚೈಸಿ ಕೂಡ ದ್ರಾವಿಡ್ ಮೇಲೆ ವಿಶ್ವಾಸ ಇಟ್ಟಿರಲಿಲ್ಲ. ಈ ವೇಳೆ ನೆರವಾಗಿದ್ದೆ ರಾಜಸ್ಥಾನ್ ರಾಯಲ್ಸ್. ಇದೇ ಕಾರಣಕ್ಕೆ ಆರ್ಆರ್ ಮೇಲೆ ನಿಷ್ಠೆ ಹೊಂದಿರುವ ದ್ರಾವಿಡ್, ಬ್ಲಾಂಕ್ ಚೆಕ್ ಪಡೆಯದಿರಲು ಮುಖ್ಯ ಕಾರಣ.