ಸಿಂಗಲ್ ಸ್ಕ್ರೀನ್ನಿಂದ ಡ್ಯುಯೆಲ್ ಸ್ಕ್ರೀನ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬಂದಿವೆ. ಈಗಾಗಲೇ ಡ್ಯುಯೆಲ್ ಫೋಲ್ಡೆಬಲ್ ಸ್ಮಾರ್ಟ್ಫೋನ್ ಅನೇಕರ ಗಮನ ಸೆಳೆದಿವೆ. ಆದರೀಗ ಅದಕ್ಕೂ ವಿಭಿನ್ನವಾಗಿ ಟ್ರಿಪಲ್ ಫೋಲ್ಡೆಬಲ್ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ನೂತನ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ಮತ್ತು ತಂತ್ರಜ್ಞಾನವನ್ನು ಮತ್ತಷ್ಟು ವೇಗವಾಗಿ ಕೊಂಡೊಯುವ ನಿರೀಕ್ಷೆಯಲ್ಲಿದೆ.
ಜನಪ್ರಿಯ ಹುವೈ ಕಂಪನಿಯು ಡ್ಯುಯೆಲ್ ಪೋಲ್ಡಿಂಗ್ ಟ್ರಿಪಲ್-ಸ್ಕ್ರೀನ್ ಫೋನಿನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಸೆಪ್ಟೆಂಬರ್ 10ರಂದು ಬಿಡುಗಡೆಗೊಳ್ಳಲಿರುವ ಐಫೋನ್ 16 ಸರಣಿಯ ಬಳಿಕ ನೂತನ ಸ್ಮಾರ್ಟ್ಫೋನನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಸದ್ಯ ಚೀನಾ ಮೂಲದ ಕಂಪನಿ ಪರಿಚಯಿಸಲಿರುವ ಟ್ರಿಪಲ್ ಸ್ಕ್ರೀನ್ ಸ್ಮಾರ್ಟ್ಫೋನ್ Z ಆಕಾರದಲ್ಲಿ ಮಡಚಲು ಅನುವು ಮಾಡಿಕೊಳ್ಳುತ್ತದೆ. ಸ್ಮಾರ್ಟ್ಫೋನ್ ತೆರೆದಾಗ 10 ಇಂಚಿನ ಡಿಸ್ಪ್ಲೇ ತೆರೆಯುತ್ತದೆ. ಮಡಚಿದಾಗ 7.6 ಇಂಚಿನ ಮತ್ತು 8 ಇಂಚಿನ ಗಾತ್ರದ ಎರಡು ಸ್ಕ್ರೀನ್ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
ಸಾಕಷ್ಟು ತೆಳ್ಳನೆಯ ಸ್ಮಾರ್ಟ್ಫೋನನ್ನು ಪರಿಚಯಿಸಲು ಹುವೈ ಮುಂದಾಗಿದೆಯಂತೆ. ಸದ್ಯ ಟ್ರಿಪಲ್ ಸ್ಕ್ರೀನ್ ಸ್ಮಾರ್ಟ್ಫೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೂತನ ಫೋನ್ ಹೇಗಿರಲಿದೆ ಎಂಬ ಕುತೂಹಲವೀಗ ಸ್ಮಾರ್ಟ್ಫೋನ್ ಪ್ರಿಯರನ್ನು ಕೆರಳಿಸಿದೆ.