ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಸಿನಿಮಾದ ಟ್ರೇಲರ್ ವಾರದ ಹಿಂದಷ್ಟೇ ರಿಲೀಸ್ ಆಗಿತ್ತು. ಈ ಬೆನ್ನಲ್ಲೇ ಸಿನಿಮಾ ವಿವಾದ ಮಾಡುವ ಸೂಚನೆ ನೀಡಿತ್ತು. ಈಗ ಸಿನಿಮಾ ಮೇಲೆ ಬ್ಯಾನ್ ಹೇರುವಂತೆ ಅಕಲಾ ತಕ್ತ್ ಹಾಗೂ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಒತ್ತಾಯ ಮಾಡಿದೆ. ಸಿಖ್ ವ್ಯಕ್ತಿಗಳನ್ನು ತಪ್ಪಾಗಿ ತೋರಿಸಲಾಗಿದೆ ಮತ್ತು ಸಮುದಾಯದ ಇತಿಹಾಸವನ್ನು ಅಗೌರವಿಸುವ ಕೆಲಸ ಆಗಿದೆ ಎಂದು ಸಮಿತಿಯವರು ಹೇಳಿದ್ದಾರೆ.
ಎಸ್ಜಿಪಿಸಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಮಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಎಮರ್ಜೆನ್ಸಿ ಸಿನಿಮಾ ಸಿಖ್ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ. ಸಿಖ್ ಸಮುದಾಯದವರಿಗೆ ಮಸಿ ಬಳಿಯುವ ಕೆಲಸ ಆಗಿದೆ. ಜರ್ನೈಲ್ ಸಿಂಗ್ ಬಿಂದ್ರನ್ವಾಲೆ ಅವರನ್ನು ನಾವು ಹುತಾತ್ಮ ಎಂದು ಪರಿಗಣಿಸಿದ್ದೇವೆ’ ಎಂಬುದಾಗಿ ಅವರು ಮಾತನಾಡಿದ್ದಾರೆ. 1975ರಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಇದನ್ನು ಆಧರಿಸಿ ಕಂಗನಾ ಸಿನಿಮಾ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಜಕೀಯ ಜೀವನ, ಅವರು ಎದುರಿಸಿದ ಸವಾಲುಗಳನ್ನು ತೋರಿಸಲಾಗಿದೆ. ಈ ಟ್ರೇಲರ್ನ ಸಿಖ್ ಸಮುದಾಯವರು ಇಷ್ಟಪಟ್ಟಿಲ್ಲ. ಈಗಾಗಲೇ ಎಸ್ಜಿಪಿಸಿ ಅವರು ಕಂಗನಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅವರ ವಿರುದ್ಧ ಎಫ್ಐಆರ್ಗೆ ಆಗ್ರಹಿಸಲಾಗಿದೆ.
‘ಸಿನಿಮಾಗಳಲ್ಲಿ ನಮ್ಮ ಇತಿಹಾಸವನ್ನು ತಪ್ಪಾಗಿ ಚಿತ್ರಿಸುವುದರಿಂದ ಸಿಖ್ ಸಮುದಾಯವು ಪದೇ ಪದೇ ನೋವುಂಟುಮಾಡುತ್ತಿದೆ. ಭವಿಷ್ಯದಲ್ಲಿ ಇಂತಹ ಸಿನಿಮಾಗಳನ್ನು ತಡೆಯಬೇಕು. ಭಾರತೀಯ ಚಿತ್ರರಂಗದಲ್ಲಿ ಸಿಖ್ ಭಾವನೆಗಳನ್ನು ಗೌರವಿಸುವುದನ್ನು ಖಚಿತಪಡಿಸಿಕೊಳ್ಳಲು ಸಿಖ್ ಸದಸ್ಯರನ್ನು ಸೆನ್ಸಾರ್ ಮಂಡಳಿಯಲ್ಲಿ ಸೇರ್ಪಡೆ ಮಾಡಬೇಕು’ ಎಂದು ಎಜ್ಪಿಸಿ ಮುಖ್ಯಸ್ಥ ಆಗ್ರಹಿಸಿದ್ದಾರೆ. ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ವಿಶಾಕ್ ನಾಯರ್, ಸತೀಶ್ ಕೌಶಿಕ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 6ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.