ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರು ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಸುನಿತಾ ಚೌಹಾಣ್ ಎಂಬುವರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನನ್ನ ಪತಿ ದೇವಾನಂದ್ ಫುಲ್ಸಿಂಗ್ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ನಂತರ 2023 ರ ಚುನಾವಣೆಯಲ್ಲಿ ಸೋತಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಅವರು 25 ಲಕ್ಷ ರೂ. ಹಾಗೂ 5 ಕೋಟಿ ರೂ.ಗಳ ಚೆಕ್ ಅನ್ನು ಮುಂಗಡವಾಗಿ ಪಡೆದಿದ್ದರು. ಎಂದು ಸುನಿತಾ ಚೌಹಾಣ್ ದೂರಿನಲ್ಲಿ ಹೇಳಿದ್ದಾರೆ.
ಅಥಣಿಯಲ್ಲಿಎಂಜಿನಿಯರ್ ಆಗಿದ್ದ ಶೇಖರ್ ನಾಯಕ್ ಎಂಬುವರ ಮೂಲಕ ಗೋಪಾಲ್ ಜೋಶಿ ಅವರ ಪರಿಚಯವಾಗಿತ್ತು. ಗೋಪಾಲ್ ಜೋಶಿ ಅವರು ಸೂಚಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಅವರ ಸಹೋದರಿ ವಿಜಯಲಕ್ಷ್ಮಿ ಅವರ ಮನೆಗೆ ಹಣ ಹಾಗೂ ಚೆಕ್ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆಗ ಸಹೋದರಿಯ ಮನೆಯಲ್ಲೇ ಇದ್ದ ಗೋಪಾಲ್ ಜೋಶಿ, ಕೇಂದ್ರ ಸಚಿವ ಅಮಿತ್ ಷಾ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿ ಮಾತನಾಡಿದಂತೆ ನಟಿಸಿದ್ದರು. ಅಲ್ಲದೆ, ತಮ್ಮ ಪತಿಗೆ ಬಿಜೆಪಿ ಟಿಕೆಟ್ ಖಚಿತವಾಗಿರುವುದಾಗಿ ಹೇಳಿ ಹಂತ ಹಂತವಾಗಿ 2 ಕೋಟಿ ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಸುನಿತಾ ಅವರು ಆರೋಪಿಸಿದ್ದಾರೆ. ಪಕ್ಷದ ಟಿಕೆಟ್ ಸಿಗದ ಬಳಿಕ ಹಣ ವಾಪಸ್ ಕೇಳಿದಾಗ ಕಾರಣಗಳನ್ನು ಹೇಳಲು ಶುರು ಮಾಡಿದರು. 200 ಕೋಟಿ ರೂ.ಗಳ ಯೋಜನೆಯ ಬಿಲ್ ಬಾಕಿಯಿದ್ದು, ಹಣವನ್ನು ಒಟ್ಟಿಗೆ ಹಿಂದಿರುಗಿಸುವುದಾಗಿ ಹೇಳಿದರು. ಆಗಸ್ಟ್ 1 ರಂದು ವಿಜಯಲಕ್ಷ್ಮಿ ಅವರ ನಿವಾಸಕ್ಕೆ ಭೇಟಿ ನೀಡಿದಾಗ ನನ್ನ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದರು. ಅಲ್ಲದೆ, ನನಗೆ ಹಾಗೂ ನನ್ನ ಮಗನಿಗೆ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಗೋಪಾಲ್ ಜೋಶಿ, ಅವರ ಪುತ್ರ ಅಜಯ್ ಜೋಶಿ ಹಾಗೂ ವಿಜಯಲಕ್ಷ್ಮಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ವಂಚಿಸಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ವಿರುದ್ಧವೂ ಆರೋಪ ಕೇಳಿಬಂದಿತ್ತು. ಈ ಕೇಸ್ನಲ್ಲಿ ಚೈತ್ರಾ ಸೇರಿದಂತೆ ಹಲವರ ಬಂಧನವಾಗಿತ್ತು. ಸದ್ಯ ಜಾಮೀನಿನ ಮೇಲೆ ಹಲವರು ಜೈಲಿನಿಂದ ಹೊರಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.