ರೇಣುಕಾಸ್ವಾಮಿ ಕೊಲೆ ಕೇಸನ್ನು ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುತ್ತಾ ಇದ್ದಾರೆ. ತನಿಖೆ ವೇಳೆ ಹತ್ತಾರು ಕಡೆಗಳಲ್ಲಿ ಸುತ್ತಾಟ ಮಾಡಿದ್ದಾರೆ. ಇದುವರೆಗೂ ಸುಮಾರು 200ಕ್ಕೂ ಹೆಚ್ಚು ಸಾಕ್ಷ್ಯಗಳ ಜೊತೆಗೆ ಸುಮಾರು 300ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆ ಮಾಡಿದ್ದಾರೆ. ಇನ್ನು ಸಾಕ್ಷ್ಯ ಸಂಗ್ರಹ ಮಾಡಿದ ಎಲ್ಲಾ ಕಡೆಗಳಲ್ಲೂ ಹೋಗಿ ಪೊಲೀಸರು ಮಹಜರು ಕೂಡ ನಡೆಸಿದ್ದಾರೆ. ಹೀಗಾಗಿ ಕಳೆದ ಎರಡೂವರೆ ತಿಂಗಳಿಂದ ಲಕ್ಷಾಂತರ ರೂಪಾಯಿ ಹಣ ಖರ್ಚಾಗಿದ್ದು ಈ ಎಲ್ಲಾ ಹಣವನ್ನು ಪೊಲೀಸರು ತಮ್ಮ ಜೇಬಿನಿಂದಲೇ ಹಾಕಿದ್ದು, ಬಿಲ್ ಸಂಗ್ರಹ ಮಾಡಿದ್ದಾರೆ. ಈಗ ಆ ಎಲ್ಲಾ ಬಿಲ್ಗಳನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದು ಹಣವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ತನಿಖೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಖರೀದಿ
ಇನ್ನು ಪೊಲೀಸರು ತನಿಖೆಯ ಭಾಗವಾಗಿ ಹಲವು ಕಡೆಗಳಲ್ಲಿ ಮಹಜರು ಮಾಡಿದ್ದಾರೆ. ಅದರಲ್ಲೂ ಬೆಂಗಳೂರು ಅಲ್ಲದೆ ಚಿತ್ರದುರ್ಗದಲ್ಲೂ ಮಹಜರು ಮಾಡಿದ್ದಾರೆ. ಕಿಡ್ನಾಪ್ ಮಾಡಿದ ಸ್ಥಳ, ಆರೋಪಿಗಳ ಮನೆ ಸೇರಿ ಹತ್ತಾರು ಕಡೆಗಳಲ್ಲಿ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ. ಹೀಗೆ ಆರೋಪಿಯನ್ನು ಕರೆದೊಯ್ಯವಾಗ ಊಟದ ಖರ್ಚಿನ ಜೊತೆಗೆ ದೈನಂದಿನ ಖರ್ಚನ್ನು ತನಿಖಾಧಿಕಾರಿಗಳೇ ಭರಿಸಿದ್ದಾರೆ. ಜೊತೆಗೆ ಸಂಗ್ರಹ ಮಾಡಿದ ಸಾಕ್ಷ್ಯಗಳನ್ನು ಹಾರ್ಡ್ ಡಿಸ್ಕ್ ಹಾಗೂ ಪೆನ್ ಡ್ರೈವ್ಗಳನ್ನು ಅಧಿಕ ಸಂಖ್ಯೆಯಲ್ಲಿ ಖರೀದಿ ಮಾಡಿದ್ದು, ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ. ಇದುವರೆಗೂ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಆ ಹಣವನ್ನು ತಮ್ಮ ಕೈಯಿಂದ ಅಧಿಕಾರಿಗಳು ಹಾಕಿದ್ದು ಈಗ ಅದನ್ನು ಮಂಜೂರು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಬಿಲ್ ಸಮೇತ ಮನವಿ ಮಾಡಿದ್ದಾರೆ.
ಸದ್ಯ ಈ ವಿಚಾರವನ್ನು ಪೊಲೀಸರು ರಿಮಾಂಡ್ನಲ್ಲಿ ಸಹ ಉಲ್ಲೇಖಿಸಿದ್ದಾರೆ. ಈ ಮೂಲಕ ಸತತ 60 ದಿನಗಳಿಗೂ ಅಧಿಕ ಅವಧಿಯಿಂದ ನಡೆಯುತ್ತಿರುವ ತನಿಖೆ ನಡುವೆ ಪೊಲೀಸರು ಮಾಡಿದ ವೆಚ್ಚದ ಸಂಪೂರ್ಣ ಮಾಹಿತಿ ಉಲ್ಲೇಖ ಮಾಡಿದ್ದು, ಇದರ ನಡುವೆ ತನಿಖೆ ಹೊಣೆ ಹೊತ್ತ ಪೊಲೀಸರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.