ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ. ಇವರು ಸದ್ಯ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಬೌಲರ್. ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಟಿ20 ಕೆಲವು ಪಂದ್ಯಗಳಲ್ಲಿ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ರೆಗ್ಯೂಲರ್ ಕ್ಯಾಪ್ಟನ್ಗಳು ಗೈರಾದಾಗ ಸಿಕ್ಕ ಅವಕಾಶ ಬಳಸಿಕೊಂಡ ಬುಮ್ರಾ ಟೀಮ್ ಇಂಡಿಯಾವನ್ನು ಗೆಲ್ಲಿಸಿ ಕ್ಯಾಪ್ಟನ್ಸಿ ರುಚಿ ಕಂಡಿದ್ದಾರೆ. ಹಾಗಾಗಿ ತನಗೆ ಟೀಮ್ ಇಂಡಿಯಾ ಕ್ಯಾಪ್ಟನ್ಸಿ ಬೇಕು ಎಂದು ಮುಕ್ತವಾಗಿ ಬುಮ್ರಾ ಹೇಳಿಕೊಂಡಿದ್ದಾರೆ. ಈಗ ಪಾಕ್ ಮಾಜಿ ಕ್ರಿಕೆಟರ್ ಬಸಿತ್ ಅಲಿ ̧ ಬುಮ್ರಾಗೆ ಕ್ಯಾಪ್ಟನ್ಸಿ ಆಸೆ ಬಿಟ್ಟು ಬೌಲಿಂಗ್ ಕಡೆಗೆ ಗಮನ ಕೊಡು ಎಂದು ಸಲಹೆ ನೀಡಿದ್ದಾರೆ.
ಈ ಸಂಬಂಧ ಮಾತಾಡಿದ ಬಸಿತ್ ಅಲಿ, ಬುಮ್ರಾ ಕ್ಯಾಪ್ಟನ್ಸಿ ಹಿಂದೆ ಬೀಳಬಾರದು. ಅವರು ವಿಶ್ವದ ಶ್ರೇಷ್ಠ ಬೌಲರ್. ಹೀಗಾಗಿ ತಮ್ಮ ಬೌಲಿಂಗ್ ಕಡೆ ಗಮನ ಕೊಡಬೇಕು. ಬುಮ್ರಾ ಇತ್ತೀಚೆಗೆ ಯಶಸ್ವಿ ಕ್ಯಾಪ್ಟನ್ಸಿ ಮಾಡಿದ ವೇಗಿಗಳಾದ ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ರನ್ನು ಉದಾಹರಣೆ ನೀಡಿದ್ದಾರೆ. ಆದರೆ, ಅವರು ಆಲ್ರೌಂಡರ್ ಆಗಿ ಯಶಸ್ಸಾದ ನಂತರ ಟೀಮ್ ಇಂಡಿಯಾ ಕ್ಯಾಪ್ಟನ್ಸಿ ಸಿಕ್ಕಿದ್ದು. ಕೇವಲ ಬೌಲರ್ ಆಗಿದ್ದಾಗ ಅವರಿಗೆ ಕ್ಯಾಪ್ಟನ್ಸಿ ಸಿಕ್ಕಿರಲಿಲ್ಲ. ಒಬ್ಬರ ಬೌಲರ್ಗೂ, ಆಲ್ರೌಂಡರ್ಗೂ ಬಹಳ ವ್ಯತ್ಯಾಸ ಇದೆ ಎಂದರು.
ಫಾಸ್ಟ್ ಬೌಲರ್ಸ್ ಕೂಡ ಬೆಸ್ಟ್ ಕ್ಯಾಪ್ಟನ್ ಆಗಬಹುದು ಎಂಬುದು ಬುಮ್ರಾ ವಾದ. ಭಾರತ ತಂಡಕ್ಕೆ 1983ರ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಪಾಕಿಸ್ತಾನದ ಇಮ್ರಾನ್ ಖಾನ್, ವಸೀಮ್ ಅಕ್ರಮ್ ಸೇರಿ ಹಲವರ ಹೆಸರನ್ನು ಉದಾಹರಣೆ ನೀಡಿರೋ ಬುಮ್ರಾ ತನಗೂ ಕ್ಯಾಪ್ಟನ್ಸಿ ಬೇಕು ಎಂದಿದ್ದರು.