ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ ಎಂದು ʼಬ್ರ್ಯಾಂಡ್ ಬೆಂಗಳೂರುʼ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರ 15 ತಿಂಗಳ ಆಡಳಿತದಲ್ಲಿ ಬೆಂಗಳೂರಿಗೆ ಬಿಡಿಗಾಸು ಅನುದಾನ ನೀಡಿಲ್ಲ. ಬೆಂಗಳೂರಿನ ಜನತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ, ರಸ್ತೆ ಗುಂಡಿಗಳಿಂದ ಇನ್ನಷ್ಟು ಅಪಘಾತಗಳು, ಸಾವು ನೋವುಗಳು ಸಂಭವಿಸುವ ಮುನ್ನ ಸಮರೋಪಾದಿಯಲ್ಲಿ ದುರಸ್ತಿ ಮಾಡಬೇಕು. ನಗರಕ್ಕೆ 25,000 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿ, ರಸ್ತೆಗಳು, ರಾಜಕಾಲುವೆಗಳನ್ನ ಸರಿಪಡಿಸುವ ಕೆಲಸ ಮಾಡಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.
ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮ ಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಏನು ಎಂಬುದನ್ನ ಬಟಾ ಬಯಲು ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ʼಬ್ರ್ಯಾಂಡ್ ಬೆಂಗಳೂರುʼ ಯೋಜನೆ ರೂಪುಗೊಂಡ ಹಳ್ಳ ಹಿಡಿದಿದೆʼ ಎಂದು ಟೀಕಿಸಿದ್ದಾರೆ. 40% ಕಮಿಷನ್ ಸರ್ಕಾರ ಅಂತ ಸುಳ್ಳು, ಅಪ ಪ್ರಚಾರ ಮಾಡುವ ಮೂಲಕ ಕನ್ನಡಿಗರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ತನ್ನ ಭ್ರಷ್ಟಾಚಾರದ ಹಸಿವು, ದಾಹ ನೀಗಿಸಿಕೊಳ್ಳಲು ನಾಡ ಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನ ಬಲಿ ಕೊಡುತ್ತಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ.
ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು, ಬಳಿಕ ಮೈಮರೆಯುವುದು ಕಾಂಗ್ರೆಸ್ ಸರ್ಕಾರಕ್ಕೆ ಹೊಸದಲ್ಲ. ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ರೂಪಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರೇ, ಮಳೆಯಿಂದಾಗಿ ಬೆಂಗಳೂರಿನ ಹಲವು ನಿವಾಸಿಗಳ ಮನೆ ಬಾಗಿಲಿಗೆ ಚರಂಡಿ ನೀರು ಬಂದಿದೆ. ಮಹಾನಗರ ಅಭಿವೃದ್ಧಿಗೆ ನೀಡಬೇಕಾದಷ್ಟು ಆರ್ಥಿಕ ನೆರವು ನೀಡಿಲ್ಲ. ಇದರಿಂದ ಸಿಲಿಕಾನ್ ಸಿಟಿ ತಗ್ಗು ಗುಂಡಿಗಳ ನಗರವಾಗಿ ಮಾರ್ಪಟ್ಟಿದೆ. ಮೊದಲು ಬೆಂಗಳೂರಿಗರ ಸಮಸ್ಯೆ ಬಗೆಹರಿಸಿ ಕೃತಾರ್ಥರಾಗಿʼ ಎಂದು ಆರ್. ಅಶೋಕ್ ಕುಟುಕಿದ್ದಾರೆ.