ಅವನು ಬೆಳಗ್ಗೆ ಹೊತ್ತಿನಲ್ಲಿ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಕ್ಲೀನಿಂಗ್ ಮಾಡುವ ಕಾರ್ಮಿಕ. ಇನ್ನೊಬ್ಬ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದವ. ಮತ್ತೊಬ್ಬ ಪೇಂಯ್ಟರ್, ಮಗದೊಬ್ಬ ಸೆಕ್ಯುರಿಟಿ ಗಾರ್ಡ್, ಇನ್ನೂ ಒಬ್ಬ ರೈತ, ಮತ್ತೊಬ್ಬ ವಿದ್ಯಾರ್ಥಿ. ಆದರೆ, ಹೀಗಿದ್ದವರು ರಾತ್ರಿಯಾದರೆ ಮಾಡುತ್ತಾ ಇದ್ದದ್ದು ವೆಪನ್ ಡೀಲಿಂಗ್. ಇಂತಾದ್ದೊಂದು ಗ್ಯಾಂಗ್ ಬೇಟೆಯಾಡಿದ್ದಾರೆ ದೆಹಲಿ ಪೊಲೀಸರು. ಕಾರ್ಯಾಚರಣೆಗೆ ಅವರಿಟ್ಟಿದ್ದ ಹೆಸರು ಆಪರೇಷನ್ ಈಗಲ್.
ಇದನ್ನು ಓದಿ:ಅವನು ಸಂಜು ಅವಳು ಗೀತಾ ಚಿತ್ರದ ಸಾಂಗ್ ರಿಲೀಸ್!
ದೆಹಲಿಯಲ್ಲಿ ದೊಡ್ಡ ವೆಪನ್ ಡೀಲ್ ಗ್ಯಾಂಗ್ನ್ನು ಅರೆಸ್ಟ್ ಮಾಡಲಾಗಿದೆ. ಈ ಗ್ಯಾಂಗ್ ಲೀಡರ್ ಹೆಸರು ಮದನ್. ಇಡೀ ಗನ್ ಮಾರ್ಕೆಟ್ ನೆಟ್ ವರ್ಕ್ ಆಪರೇಟ್ ಮಾಡುತ್ತಿದ್ದ ಮದನ್, ಉತ್ತರ ಪ್ರದೇಶದ ಘಾಜಿಯಾಬಾದ್ನವನು. 33 ವರ್ಷಕ್ಕೇ ಈತ ಗನ್ ಮಾರ್ಕೆಟ್ಟಿನಲ್ಲಿ ಬೃಹತ್ ನೆಟ್ ವರ್ಕ್ ಕಟ್ಟಿಕೊಂಡಿದ್ದ. 33 ವರ್ಷಕ್ಕೇ ಈತನ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಕೇಸುಗಳೂ ಇದ್ದವು. ಇನ್ನೊಬ್ಬನ ಹೆಸರು ಅರ್ಜುನ್. ಈತ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ. ಅರೆಸ್ಟ್ ಆಗಿರುವ ಅಜಯ್ ಕೂಡಾ ಅಷ್ಟೇ, ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ. ಈ ಗ್ಯಾಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ರೋಚಕ ಕಥೆ. ಅರ್ಷದ್ ಮತ್ತು ಮೊಹಮ್ಮದ್ ಸುಲೇಮಾನ್ ಇಬ್ಬರು ಮನೆಯೊಂದನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾಗ ಸಿಕ್ಕಿ ಬಿದ್ದಿದ್ದರು. ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಗನ್ ಮಾರ್ಕೆಟ್ ಕೂಡಾ ಆಕ್ಟಿವ್ ಇದೆ ಎಂಬ ಮಾಹಿತಿ ಸಿಕ್ಕಿತ್ತು. ಆರೋಪಿಗಳಿಂದ ಗನ್ ನೆಟ್ ವರ್ಕ್ ಜಾಲದ ಸುಳಿವು ಹಿಡಿದ ಪೊಲೀಸರು, ಗ್ಯಾಂಗ್ಗೆ ಬಲೆ ಬೀಸಿದರು. ನಮಗೂ ವೆಪನ್ ಬೇಕು ಎಂಬ ಗ್ರಾಹಕರ ವೇಷದಲ್ಲಿ ಮದನ್ ಗ್ಯಾಂಗ್ಗೆ ಗಾಳ ಹಾಕಿದರು. ವೆಪನ್ ಕೊಡಲು ಬಂದಾಗ ಪೊಲೀಸರು ಸುತ್ತುರವರೆದು ಆರೋಪಿಗಳನ್ನೆಲ್ಲ ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಪೊಲೀಸರು ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಇದೊಂದು ಪೊಲೀಸ್ ಟ್ರಾಪ್ ಎಂದು ಗೊತ್ತಾಗುತ್ತಿದ್ದಂತೆಯೇ ತಮ್ಮ ಬಳಿ ಇದ್ದ ವೆಪನ್ ಮೂಲಕ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಗುಂಡಿನ ಚಕಮಕಿ ನಂತರ ಅರೆಸ್ಟ್ ಆಗಿದ್ದಾರೆ. ಒಟ್ಟು 18 ಮಂದಿಯ ಜಾಲವನ್ನು ಹಿಡಿಯಲಾಗಿದೆ. ಅಲ್ಲದೆ ಆರೋಪಿಗಳಿಂದ 4 ಆಟೋಮ್ಯಾಟಿಕ್ ಪಿಸ್ತೂಲ್, 8 ಕಂಟ್ರಿಮೇಡ್ ಪಿಸ್ತೂಲ್, 1 ಕಂಟ್ರಿಮೇಡ್ ರೈಫಲ್, 3 ಚಾಕು, 33 ಲೈವ್ ಕ್ಯಾಟ್ರಿಡ್ಜ್ಗಳು ಮತ್ತು ಒಂದುಕದ್ದ ಕಾರ್ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳು ಗನ್ ಗಿರಾಕಿಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಕಾಂಟ್ಯಾಕ್ಟ್ ಮಾಡುತ್ತಿದ್ದರು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿಯೇ ವ್ಯವಹಾರ ಕುದುರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆ ಎಲ್ಲ ಆರೋಪಿಗಳಿಗೂ ಬಹುತೇಕ ಕ್ರಿಮಿನಲ್ ಹಿನ್ನೆಲೆ ಇದ್ದು, 50ಕ್ಕೂ ಹೆಚ್ಚು ಕೇಸುಗಳಿದ್ದವು ಎಂದು ದೆಹಲಿ ಪೊಲೀಸ್ ಎಸಿಪಿ ಅರವಿಂದ್ ಮಾಹಿತಿ ನೀಡಿದ್ದಾರೆ.