ಶಂಕರ್ ನಾಗ್ ಅವರಿಗೆ ಇಂದು (ನವೆಂಬರ್ 9) ಜನ್ಮದಿನ. ಅವರು ಬದುಕಿದ್ದರೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಕೇವಲ 35ನೇ ವಯಸ್ಸಿಗೆ ಶಂಕರ್ ನಾಗ್ ಅವರು ನಿಧನ ಹೊಂದಿದರು. ಅವರು ಇಲ್ಲ ಎಂಬ ನೋವು ಅಭಿಮಾನಿಗಳನ್ನು ಈಗಲೂ ಕಾಡುತ್ತಿದೆ. ಶಂಕರ್ ನಾಗ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಕ್ರಾಂತಿ ಮಾಡಿದ್ದರು. ಶಂಕರ್ ನಾಗ್ ಅವರು ಅನೇಕ ಕನಸನ್ನು ಕಂಡಿದ್ದರು. ಬೆಂಗಳೂರಲ್ಲಿ ಮೆಟ್ರೋ ನಿರ್ಮಾಣ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ನಂದಿ ಬೆಟ್ಟದಲ್ಲಿ ರೋಪ್ವೇ ಬರಬೇಕು ಎಂಬುದು ಅವರ ಆಸೆ ಆಗಿತ್ತು. ಅವರು ಮೃತಪಟ್ಟ ಹಲವು ವರ್ಷಗಳ ಬಳಿಕ ಬೆಂಗಳೂರಿಗೆ ಮೆಟ್ರೋ ಬಂತು.
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಆಟೋ ನೋಡಿದರೆ, ಸ್ಯಾಂಡಲ್ವುಡ್ನ ದಿಗ್ಗಜರನ್ನು ನೆನಪಿಸಿಕೊಳ್ಳುವಾಗ, ಅಷ್ಟೇ ಯಾಕೆ ನಮ್ಮ ಮೆಟ್ರೋ ಉದ್ಘಾಟನೆಯಾಗುವಾಗಲೂ ಕನ್ನಡಿಗರು ನೆನಪಿಸುಕೊಳ್ಳುವ ನಟನೆಂದರೆ ಶಂಕರ್ನಾಗ್. ಚಿತ್ರದುರ್ಗದಲ್ಲಿ ಅಪಘಾತವಾಗಿ ಕೊನೆಯುಸಿರೆಳೆದ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ ಅವರ ಸ್ಥಾನವನ್ನು ತುಂಬಲು ಇವತ್ತಿಗೂ ಅಸಾಧ್ಯ. ದೂರದೃಷ್ಟಿ ಜೊತೆ ನಾಟಕ, ನಟನೆ, ನಿರ್ದೇಶನಕ್ಕೂ ತಾವು ಸೈ ಎಂದು ಚಿಕ್ಕ ವಯಸ್ಸಿನಲ್ಲಿಯೇ ಪ್ರೂವ್ ಮಾಡಿದ ಈ ನಟನ ಪತ್ನಿ ಅರುಂಧತಿ ನಾಗ್, ನಾಟಕಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ, ಮಗಳು ಕಾವ್ಯಾ ಬಗ್ಗೆ ಎಲ್ಲಿಯೂ ವಿಷಯ ಸಿಗೋಲ್ಲ. ವಿದೇಶದಿಂದ ಮರಳಿದ ಮೇಲೆ ಸದ್ಯ ಬೆಂಗಳೂರಿನಲ್ಲಿ ವಾಸ ಇರುವ ಕಾವ್ಯಾನಾಗ್ ಈಗೇನು ಮಾಡುತ್ತಿದ್ದಾರೆ ಎಂಬುದು ಬಹುತೇಕರ ಕುತೂಹಲ.
ವಿದ್ಯಾಭ್ಯಾಸ ಮುಗಿದ ಮೇಲೆ ಕಾವ್ಯಾ ನಾಗ್ ಅವರು ಆಯ್ಕೆ ಮಾಡಿಕೊಂಡಿದ್ದು ವಕೀಲಿಕೆ. ಇದರ ಜತೆಗೆ ಎನ್ಜಿಓವೊಂದರಲ್ಲಿ ಕೆಲಸ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅಂದಹಾಗೆ ವಕೀಲ ವೃತ್ತಿ ಮಾಡುತ್ತಿರುವಾಗಲೇ ಬಾಲ್ಯದ ಗೆಳೆಯನ್ನು ವರಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 2010ರಲ್ಲಿ ತಮ್ಮ ಬಾಲ್ಯದ ಗೆಳೆಯ ಸಲಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದನ್ನು ಓದಿ:ಪುಷ್ಪ 2 ಚಿತ್ರದ ಐಟಂ ಸಾಂಗ್ನಲ್ಲಿ ಶ್ರೀಲೀಲಾ ವಯ್ಯಾರ!
ಹುಣಸೂರಿನ ತಮ್ಮ ತಂದೆ ಜಮೀನಿನಲ್ಲಿ ಕೋಕೋನೆಸ್ ಅನ್ನುವ ಕಂಪನಿ ತೆರೆದಿರುವ ಕಾವ್ಯಾನಾಗ್, ಕೆಮಿಕಲ್ ಮುಕ್ತ ಸೋಪ್ ಹಾಗೂ ಆಯಿಲ್ ಉತ್ಪಾದಿಸಿ, ಮಾರುತ್ತಿದ್ದಾರೆ. ಕೋಕೋನೆಸ್ ಸಂಸ್ಥೆ ಮೂಲಕ ತಯಾರಾಗುತ್ತಿರುವ ಪರಿಶುದ್ಧ ತೆಂಗಿನೆಣ್ಣೆ ಅಥವಾ ವರ್ಜಿನ್ ಆಯಿಲ್ ಬೆಂಗಳೂರಿನ ಆರ್ಗ್ಯಾನಿಕ್ ಶಾಪ್ಗಳಲ್ಲಿ, ಕೋಕೋನೆಸ್ ವೆಬ್ಸೈಟ್ ಅಮೇಜಾನ್ನಂಥ ಆನ್ಲೈನ್ ತಾಣಗಳಲ್ಲಿ ದೊರೆಯುತ್ತದೆ. ಬೆಂಗಳೂರು ಹೊರವಲಯದಲ್ಲಿ ಇವರ ಕೋಕೋನೆಸ್ ತೆಂಗಿನ ಹಾಲು ಉತ್ಪಾದಕ ಘಟಕವಿದೆ.
ಶಂಕರ್ ನಾಗ್ ಅವರು 09 ನವೆಂಬರ್ 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು. ಶಂಕರ್ ನಾಗ್ ಅವರ ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ ನಾಗರಕಟ್ಟೆ ಉರುಫ್ ಶಂಕರ್ನಾಗ್ ಅಂತ ಇವರನ್ನು ಕರೆಯುತ್ತಿದ್ದರು.
ಇನ್ನು ಶಂಕರ್ ನಾಗ್ ಒಟ್ಟು ವಿಭಿನ್ನವಾದ 9 ಚಿತ್ರಗಳನ್ನು ನಿರ್ದೇಶಿಸಿದರು. ಇದರಲ್ಲಿ ಏಳು ಕನ್ನಡ ಚಿತ್ರಗಳಿದ್ದರೆ, ಒಂದು ಹಿಂದಿ ಮತ್ತು ಒಂದು ಇಂಗ್ಲೀಷ್ ಚಿತ್ರಗಳಿವೆ. ಹಿಂದಿಯಲ್ಲಿ ಲಾಲಚ್ ಎಂಬ ಚಿತ್ರವನ್ನು ಹಾಗೂ ಇಂಗ್ಲಿಷ್ನಲ್ಲಿ ವಾಚಮನ್ (ಮಾಲ್ಗುಡಿ ಡೇಸ್ ಆಧಾರಿತ) ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.