ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು. ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್ ಪ್ರಿಯಾ ತರ್ಲೆ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಈ ಸೀರೀಯಲ್ ಸುದ್ದಿಯಲ್ಲಿ ಇರುತ್ತೆ. ಆದರೆ ಇದೀಗ ಸೀತಾರಾಮ ಸೀರಿಯಲ್ ಪ್ರಿಯಾ ಪಾತ್ರಧಾರಿಯಲ್ಲಿ ನಟಿಸಿದ್ದ ನಟಿ ಮೇಘನಾ ಶಂಕರಪ್ಪ ಸುದ್ದಿಯಲ್ಲಿದ್ದಾರೆ.
ಸೀತಾರಾಮ ಸೀರಿಯಲ್ ಹಾಗೂ ಡಿಕೆಡಿ ಶೋನಲ್ಲಿ ಸಖತ್ ಬ್ಯೂಸಿಯಾಗಿದ್ದ ನಟಿ ಮೇಘನಾ ಶಂಕರಪ್ಪ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದರು. ಅಯ್ಯೋ ದಿಢೀರ್ ಅಂತ ನಟಿ ಮೇಘನಾ ಅವರಿಗೆ ಏನಾಯ್ತು? ಸೀರಿಯಲ್ನಲ್ಲೂ ಇಲ್ಲ, ಇತ್ತ ಡಿಕೆಡಿ ಶೋನಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಂತ ಬೇಸರಗೊಂಡಿದ್ದರು. ಹೀಗಾಗಿ ಅಭಿಮಾನಿಗಳು ಅವರ ಪರ್ಸನಲ್ ಅಕೌಂಟ್ಗೆ ಮೆಸೇಜ್ ಮಾಡುವ ಮೂಲಕ ಕಳವಳ ವ್ಯಕ್ತ ಪಡಿಸಿದ್ದರು. ಅದಕ್ಕಾಗಿಯೇ ನಟಿ ಮೇಘನಾ ಶಂಕರಪ್ಪ ಅವರು ಖುದ್ದಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಅದು ಕೂಡ ಅವರ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳ ಗೊಂದಲವನ್ನು ದೂರ ಮಾಡಿದ್ದಾರೆ. ಹೌದು, ಮೇಘನಾ ಶಂಕರಪ್ಪ ಅವರು ಬೆಡ್ ರೆಸ್ಟ್ನಲ್ಲಿದ್ದಾರೆ. ಕಾರಣ ಅವರ ಕಣ್ಣಿನ ಮೇಲೆ ಅಂದ್ರೆ ಹುಬ್ಬಿನ ಕೆಳಗೆ ಹರ್ಪಿಸ್ ಜೋಸ್ಟರ್ ಆಗಿದೆ. ಹರ್ಪಿಸ್ ಜೋಸ್ಟರ್ ಅನ್ನು ಕನ್ನಡದಲ್ಲಿ ಸರ್ಪಸುತ್ತು ಎಂದು ಕರೆಯಲಾಗುತ್ತದೆ. ಈ ಹರ್ಪಿಸ್ ಜೋಸ್ಟರ್ ಒಂದು ವೈರಲ್ ಸೋಂಕು ಆಗಿದೆ. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಬಹುದು. ಮೊದಲೇ ದೇಹಸ್ಥಿತಿ ರೋಗಾಣುಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸರ್ಪಸುತ್ತು ಕಂಡು ಬರುತ್ತದೆ. ಅದು ಚರ್ಮದ ಮೇಲೆ ನೋವಿನ ದದ್ದು ಅಥವಾ ಗುಳ್ಳೆಗಳನ್ನು ಉಂಟುಮಾಡುತ್ತದೆ. ಇದು ವರಿಸೆಲ್ಲಾ-ಜೋಸ್ಟರ್ ವೈರಸ್ನಿಂದ ಉಂಟಾಗುತ್ತದೆ.
ಹೀಗಾಗಿ ವೈದ್ಯರು ನಟಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರಂತೆ. ಅದಕ್ಕಾಗಿ ನಟಿ ಸೀತಾರಾಮ ಸೀರಿಯಲ್ ಹಾಗೂ ಡಿಕೆಡಿ ಶೋನಲ್ಲಿ ಕಾಣಸಿಕೊಳ್ಳು ಆಗುತ್ತಿಲ್ಲ. ಆದಷ್ಟು ಬೇಗನೇ ಗುಣಮುಖಳಾಗಿ ಬರುತ್ತೇನೆ. ಡಿಕೆಡಿ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತೇನೆ. ನನ್ನ ಬಗ್ಗೆ ಯಾರೆಲ್ಲಾ ಕೇರ್ ಮಾಡಿ ಮೆಸೇಜ್ ಮಾಡಿದ್ದೀರೋ ಅವರಿಗೆಲ್ಲ ಧನ್ಯವಾದಗಳು ಅಂತ ತಿಳಿಸಿದ್ದಾರೆ.