ವೀರಪ್ಪನ್ ಒಬ್ಬ ಕಾಡುಗಳ್ಳ, ದಂತಚೋರ. ದರೋಡೆಕೋರನಾಗಿದ್ದ. ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ದಟ್ಟ ಕಾಡುಗಳಲ್ಲಿ ಆತ ವಾಸಿಸುತ್ತಿದ್ದ. ವೀರಪ್ಪನ್ ಹೆಸರು ಕೇಳಿದರೆ ನೆನಪಾಗುವುದು, ಆನೆಗಳ ಹತ್ಯೆ, ಗಂಧದ ಮರಗಳನ್ನು ಕಡಿಯುವುದು, ಗಣ್ಯವ್ಯಕ್ತಿಗಳ ಅಪಹರಣ, ಪೊಲೀಸರ ಹತ್ಯೆ ಹೀಗೆ ಹಲವಾರು. ಇದೀಗ ಇದೇ ವೀರಪ್ಪನ್ ಇದ್ದಿದ್ರೆ ಚೆನ್ನಾಗಿತ್ತು ಎಂದು ರಾಮನಗರ ರೈತರು ಆತನಿಗೆ ಬಹುಪರಾಕ್ ಹೇಳುತ್ತಿದ್ದಾರೆ. ಅವರು ಹೀಗೆ ಹೇಳಲು ಕಾರಣ ಕೂಡ ಇದೆ.
ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಗೆ ತಲೆನೋವಾಗಿದ್ದ ವೀರಪ್ಪನ್ ಬಗ್ಗೆ ಇದೀಗ ರಾಮನಗರ ರೈತರು ಬಹುಪರಾಕ್ ಹೇಳುತ್ತಿದ್ದಾರೆ. ವೀರಪ್ಪನ್ನಿಂದ ಆನೆ ಕಾಟವೇ ಇರಲಿಲ್ಲ. ಕೊನೆ ಪಕ್ಷ ಅವನಾದರೂ ಆನೆ ಹೊಡೆಯುತ್ತಿದ್ದ. ನಮ್ಮ ಬೆಳೆ ಆದರೂ ಉಳಿತಿತ್ತು. ಹಾಗಾಗಿ ವೀರಪ್ಪನ್ ಇದ್ದಿದ್ದರೆ ಚೆನ್ನಾಗಿತ್ತು ಎಂದು ರಾಜ್ಯ ಸರಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರ ಅರಣ್ಯ ಇಲಾಖೆಯಿಂದ ನಮಗೆ ಪರಿಹಾರ ಸಿಕ್ಕಿಲ್ಲ. ಕಾಡಾನೆಗಳಿಂದ ನಾವು ಬೆಳೆ ಹಾಕುವುದನ್ನೇ ಬಿಟ್ಟಿದ್ದೇವೆ. ಕನಕಪುರ, ಹಾರೋಹಳ್ಳಿ, ರಾಮನಗರ ಸುತ್ತಲೂ ಕಾಡಾನೆ ಕಾಟ ಹೆಚ್ಚಾಗಿದ್ದು, ರಾಗಿ, ಭತ್ತ, ತೆಂಗು ಬೆಳೆಗಳು ನಾಶವಾಗಿವೆ . ಆನೆಗಳ ಗುಂಪಿನಿಂದ ಬೆಳೆ ಹಾಳಾಗಿವೆ. ಬೆಳೆ ಪರಿಹಾರಕ್ಕೆ ಅಂಗಲಾಚಿದರೂ ಸಮರ್ಪಕ ಪರಿಹಾರ ಸಿಗುತ್ತಿಲ್ಲ ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀರಪ್ಪನ್ ಆನೆ ಹೊಡೆದು ಹಾಕುತ್ತಿದ್ದ ಆಗ ನಮಗೆ ಆನೆ ಕಾಟ ಇರಲಿಲ್ಲ. ಈಗ ಆನೆ ಕಾಟ ಮಿತಿ ಮೀರಿದೆ ಎಂದು ರೈತ ಶಿವಪ್ಪ ಹೇಳುತ್ತಾರೆ.
ಯಾವುದೇ ಸರ್ಕಾರ ಬಂದರೂ ನಮಗೆ ಪರಿಹಾರ ಸಿಗುತ್ತಿಲ್ಲ. ರೈಲು ಕಂಬಿ ಕೂಡ ಅಳವಡಿಸಿಲ್ಲ. ನಾವು ಹಾಕುವ ಬೆಳೆಯನ್ನು ಅಂಗಡಿಯಲ್ಲಿ ಖರೀದಿ ಮಾಡಿ ಊಟ ಮಾಡುತ್ತಿದ್ದೇವೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ