ಮೂರನೇ ವಾರಕ್ಕೆ ‘ಬಿಗ್ ಬಾಸ್’ ಮನೆ ಅಕ್ಷರಶಃ ರಣಭೂಮಿಯಾಗಿದೆ. ಬಾಯಿ, ನಾಲಿಗೆಗೆ ಲಗಾಮು ಇಲ್ಲದೆ ಜಗದೀಶ್ ಆಡಿದ ಬೀಪ್ ಶಬ್ದಗಳಿಂದ ‘ಬಿಗ್ ಬಾಸ್’ ಮನೆ ದೊಡ್ಡ ಕೋಲಾಹಲಕ್ಕೆ ಸಾಕ್ಷಿಯಾಗಿದೆ. ಯಾವ ಮಟ್ಟಕ್ಕೆ ಅಂದ್ರೆ, ‘’ಇದು ಕಡೆಯ ಎಚ್ಚರಿಕೆ.. ಸುಮ್ಮನೆ ಕುಳಿತುಕೊಳ್ಳಿ..’’ ಅಂತ ‘ಬಿಗ್ ಬಾಸ್’ ಜೋರಾಗಿ ಕಿರುಚುತ್ತಿದ್ದರೂ.. ಜಗದೀಶ್ ಮಾತ್ರ ಸುಮ್ಮನಾಗಲಿಲ್ಲ! ಜಗದೀಶ್ ಬಾಯಿಂದ ಬಂದ ಅವಾಚ್ಯ ಪದಗಳಿಂದಾಗಿ ಸ್ಪರ್ಧಿಗಳೆಲ್ಲಾ ರೊಚ್ಚಿಗೆದ್ದರು, ಅದರಲ್ಲೂ ಮಹಿಳಾ ಸ್ಪರ್ಧಿಗಳ ರಕ್ತ ಕೊತ ಕೊತ ಅಂತ ಕುದಿಯಿತು.
ಅಸಲಿಗೆ, ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ 17ನೇ ರಾತ್ರಿ ಏನೆಲ್ಲಾ ಆಯ್ತು ಗೊತ್ತಾ? ಮಹಿಳಾ ಸ್ಪರ್ಧಿಗಳು ಕೆರಳುವುದಕ್ಕೆ ಕಾರಣವಾದ ಅಂಶಗಳೇನು?
ಬೀಪ್ ಪದಗಳನ್ನ ಸರಾಗವಾಗಿ ಉಪಯೋಗಿಸಿದ ಜಗದೀಶ್!
ಮೊದಲೇ ಗೋಲ್ಡ್ ಸುರೇಶ್ ಬಳಿ ಮಾನಸಾ ಬಗ್ಗೆ ಅವಾಚ್ಯ ಶಬ್ದಗಳನ್ನ ಜಗದೀಶ್ ಬಳಸಿದ್ದರು. ಗೋಲ್ಡ್ ಸುರೇಶ್ ‘ಬಳಸಬೇಡಿ’ ಎಂದರೂ ಜಗದೀಶ್ ಎಚ್ಚೆತ್ತುಕೊಳ್ಳಲಿಲ್ಲ. ನಾಮಿನೇಷನ್ ಪ್ರಕ್ರಿಯೆ ಮುಗಿದ್ಮೇಲೆ.. ರಾತ್ರಿ ವೇಳೆ.. ಗೋಲ್ಡ್ ಸುರೇಶ್ ಜೊತೆ ಜಗದೀಶ್ ಮಾತನಾಡುತ್ತಿದ್ದರು. ಆಗ ಪ್ರತಿಯೊಬ್ಬರ ಮೇಲೂ ಜಗದೀಶ್ ಕಾಮೆಂಟ್ ಮಾಡುತ್ತಿದ್ದರು. ಈ ವೇಳೆ ‘’ಮಂಜಣ್ಣ ಹೊಡ್ಕೊಂಡ..’’ ಅಂತ್ಹೇಳಿ ಬೀಪ್ ಪದ ಬಳಸಿದರು ಜಗದೀಶ್. ಅದಕ್ಕೆ, ‘’ಮಾತಾಡ್ಬೇಕಾದರೆ ಬೈಗುಳವನ್ನ ಬಳಸಬೇಡ’’ ಅಂತ ಗೋಲ್ಡ್ ಸುರೇಶ್ ಮತ್ತೆ ಹೇಳಿದರು. ಆದರೂ ಕಿವಿಗೆ ಹಾಕಿಕೊಳ್ಳದ ಜಗದೀಶ್, ‘’ಅವಳು ಹಂಸ ಕೆಳಗೆ ಬಿದ್ದಾಗ ನಾವು ಉಳಿಸಿದ್ದು **’’ ಅಂತ್ಹೇಳಿ ಮತ್ತೆ ಅವಾಚ್ಯ ಶಬ್ದವನ್ನ ಬಳಸಿ ಜಗದೀಶ್ ಬೀಪ್ ಹಾಕಿಸಿಕೊಂಡರು. ಇದರಿಂದ ಬೇಸರಗೊಂಡ ಗೋಲ್ಡ್ ಸುರೇಶ್, ‘’ಅಪ್ಪ.. ನೀನು ಮತ್ತೆ ಆ ಪದ ಯೂಸ್ ಮಾಡಬೇಡ.. ನನ್ನ ಹತ್ತಿರ ಕೂತಾಗ ಆ ಪದಗಳನ್ನ ಬಳಸಬೇಡ’’ ಅಂತ ಕೇಳಿಕೊಂಡರು. ಆದರೂ ಕೇಳದ ಜಗದೀಶ್, ‘’ಅದು Offensive ಆದರೆ ನಾನು ಜವಾಬ್ದಾರಿ ಹೊರುತ್ತೇನೆ’’ ಅಂತ ವಾದಿಸಿದರು. ‘’ನನ್ನ ಮುಂದೆ ಅವರ ಬಗ್ಗೆ ಹಾಗೆ ಯೂಸ್ ಮಾಡಬೇಡ. ನಾನು ಎದ್ದು ಹೋಗುತ್ತೇನೆ’’ ಅಂತ ಗೋಲ್ಡ್ ಸುರೇಶ್ ಎದ್ದರು. ಆಗ, ‘’ನಿನ್ನ ಇಷ್ಟ’’ ಅಂತ ಜಗದೀಶ್ ಜಗಳ ಶುರು ಮಾಡಿದರು. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯಿತು.
‘’ಯಾರಿಗೋ ಅಂದ್ರೆ ನಿನಗೆ ಹೊಟ್ಟೆ ಉರಿಯುತ್ತದೆ’’ ಅಂತ ಜಗದೀಶ್ ಹೇಳಿದಾಗ, ‘’ಹೆಣ್ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಬೇಡ’’ ಅಂತ ಗೋಲ್ಡ್ ಸುರೇಶ್ ಮತ್ತೊಮ್ಮೆ ಹೇಳಿದರು. ಅದಕ್ಕೆ, ‘’ಯಾಕೆ ಗಂಡು ಮಕ್ಕಳು ಬಿಟ್ಟಿ ಬಿದ್ದಿದ್ದೀವಾ? ಅದು ನಿನ್ನ ಮನಸ್ಥಿತಿ. ನನಗೆ ಇಬ್ಬರೂ ಒಂದೇ. ಏಯ್ ಹೋಗೋಲೇ..’’ ಅಂತ್ಹೇಳಿ ಗೋಲ್ಡ್ ಸುರೇಶ್ ಮೇಲೆ ಏಕವಚನದಲ್ಲಿ ಬೈಯ್ಯಲು ಆರಂಭಿಸಿದರು ಜಗದೀಶ್. ಸಾಲದಕ್ಕೆ ಗೋಲ್ಡ್ ಸುರೇಶ್ಗೂ ಕೆಟ್ಟ ಪದದಿಂದ ನಿಂದಿಸಿದರು. ಅದಕ್ಕೂ ಬೀಪ್ ಸೌಂಡ್ ಬಿತ್ತು.!
ಬರಬಾರದ ಮಾತುಗಳೆಲ್ಲಾ ಹೊರಬಂದವು! 5 ಕೋಟಿ ಡೀಲರ್, ರೋಲ್ಕಾಲ್ ಲಾಯರ್!
ಚೈತ್ರಾ ಕುಂದಾಪುರ – ಆ ಪದ ಯೂಸ್ ಮಾಡಿದ್ದು ಹೌದಾ?
ಗೋಲ್ಡ್ ಸುರೇಶ್ – ಹೌದು..
ಜಗದೀಶ್ – ನನಗೆ ಮೋಸ ಮಾಡಿದವರಿಗೆ ನಾನು ಹೇಳ್ತೀನೋ.. ಏನು ಮಾಡಿಕೊಳ್ತೀಯೋ ನೀನು?
ಹಂಸ – ಯಾರು ಮೋಸ ಮಾಡಿರೋದು ನಿಮಗೆ?
ಚೈತ್ರಾ ಕುಂದಾಪುರ – ಧಮ್ ಇದ್ದರೆ ಹೌದು ಅಂತ ಹೇಳಿ..
ಜಗದೀಶ್ – ನಿನಗೆ ತಾಕತ್ತಿದ್ದರೆ ಏನು ಮಾಡಿಕೊಳ್ತೀಯೋ.. ಮಾಡಿಕೋ ಹೋಗು..
ಚೈತ್ರಾ ಕುಂದಾಪುರ – ತಾಕತ್ತಿದ್ದರೆ ಉಪಯೋಗಿಸಿದ್ದೀನಿ ಅಂತ ಒಪ್ಪಿಕೊಳ್ಳಿ.
ಜಗದೀಶ್ – 5 ಕೋಟಿ ದುಡ್ಡು ಈಸ್ಕೊಂಡು ಬಂದಿಲ್ಲ.
ಚೈತ್ರಾ ಕುಂದಾಪುರ – ನಿನ್ನ ತರಹ ರೋಲ್ಕಾಲ್ ಮಾಡಿಲ್ಲ. ಧಮ್ ಇದ್ದರೆ, ಅಪ್ಪಂಗೆ ಹುಟ್ಟಿದ್ದರೆ ಇನ್ನೊಂದು ಸಲ ಆ ಪದವನ್ನ ಯೂಸ್ ಮಾಡು..
ಜಗದೀಶ್ – 5 ಕೋಟಿ ಚಾರ್ಜ್ ಶೀಟ್ನಲ್ಲೇ ಇದೆ. ನಿನಗೆ ಪ್ರಾಮಾಣಿಕತೆ ಇದ್ಯಾ? 5 ಕೋಟಿ ಡೀಲ್ ಮಾಡಿಕೊಂಡಿದ್ಯಾ. ನೀನೊಬ್ಬಳು 5 ಕೋಟಿ ಡೀಲರ್.
ಚೈತ್ರಾ ಕುಂದಾಪುರ – ರೋಲ್ಕಾಲ್ ಲಾಯರ್ ನೀನು. ನಿನ್ನ ಲೈಸೆನ್ಸ್ ಕ್ಯಾನ್ಸಲ್ ಆಗಿದೆ ಕಣೋ.. ನೀನು ಲಾಯರ್ಗಿರಿ ಮಾಡೋ ಹಾಗಿಲ್ಲ.
ಜಗದೀಶ್ – 5 ಕೋಟಿ ಲಂಚ ತಗೊಂಡಿದ್ದೀಯಾ
ಚೈತ್ರಾ ಕುಂದಾಪುರ – ಒಬ್ಬ ಅಪ್ಪಂಗೆ ಹುಟ್ಟಿದ್ರೆ ಬಾರೋ ಲೇ. ನಿನ್ನ ತರಹ ರೋಲ್ಕಾಲ್ ಮಾಡಿಲ್ಲ.
ಕ್ಯಾಮರಾ ಮುಂದೆ ರೊಚ್ಚಿಗೆದ್ದ ಹಂಸ!
ಇಷ್ಟೆಲ್ಲಾ ರಾದ್ಧಾಂತ ಆಗ್ತಿರುವಾಗಲೇ.. ಕ್ಯಾಮರಾ ಮುಂದೆ ಬಂದ ಹಂಸ, ‘’ಅವರೇನಾದರೂ ಮಾತಾಡಿದ್ರೆ, ‘ನೀವು ಮಾತಾಡಬೇಡಿ, ಜಗಳ ಆಡಬೇಡಿ’ ಅಂತ ಹೇಳ್ತೀರಾ. ಇದಕ್ಕೂ ಮುಂಚೆ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ಇವತ್ತೂ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. *** ಅಂತ ಹೇಳಿದ್ದಾರೆ. ಇದರ ಅರ್ಥ ಏನು? ನಾವು ಇಲ್ಲಿಗೆ ಬಂದಿರೋದು ಯಾವನ್ ಯಾವನ್ ಕೈಯಲ್ಲೋ.. *** ಅನಿಸಿಕೊಂಡು, ಏನೇನೋ ಅನ್ನಿಸಿಕೊಳ್ಳೋಕೆ ಅಲ್ಲ ‘ಬಿಗ್ ಬಾಸ್’. ಇದಕ್ಕೆ ಏನಾದರೂ ಒಂದು ಪರಿಹಾರ ಬೇಕೇ ಬೇಕು. ನಿಮಗೆ ಕೊಡೋಕೆ ಆಗುತ್ತೋ.. ಇಲ್ಲ ನಾವು ಕೊಡಬೇಕೋ.. ಹೇಳಿ.. ನನ್ನ ಗಂಡನನ್ನ ಸಾಯಿಸೋಕೆ ಈ ನನ್ಮಗ ಯಾರು ಅಂತ ನಾನು ಕೇಳ್ತಿರೋದು’’ ಅಂತ ತೀವ್ರ ಸಿಟ್ಟಿನಲ್ಲೇ ಹಂಸ ಪ್ರಶ್ನಿಸಿದರು.
ಮಾನಸಾ – ಜಗದೀಶ್ ಮಧ್ಯೆ ಜಟಾಪಟಿ!
‘’ಗಂಡ್ಸಾ ನೀನು? ಹೋಗಿ ಸೀರೆ ಉಟ್ಕೋ ಬಾ..’’ ಅಂತ ಮಾನಸಾ ಕೆರಳಿದರು. ‘’ಸೀರೆ ಯಾಕೆ? ಹೆಂಗಸಾಗೋಕೂ ಯೋಗ್ಯತೆ ಇಲ್ಲ ಇವನಿಗೆ’’ ಅಂತ ಜಗದೀಶ್ಗೆ ಹಂಸ ತಿವಿದರು. ಆಗ, ‘’ನೀನೇನು ಡಾನ್ ಅಲ್ಲ.. ಏಯ್.. ಹೋಗೇಲೇ..’’ ಅಂತ ಜಗದೀಶ್ ಹೇಳಿದಾಗ ಮಾನಸಾ ಸಿಟ್ಟಾಗಿ ಹತ್ತಿರಕ್ಕೆ ಬಂದರು. ಆಗ ಜಗದೀಶ್ ಕೂಡ ಹತ್ತಿರಕ್ಕೆ ಬಂದರು. ಈ ವೇಳೆ ತ್ರಿವಿಕ್ರಮ್ ಮಾನಸಾನ ಎಳ್ಕೊಂಡ್ರೆ.. ರಂಜಿತ್ – ಜಗದೀಶ್ನ ತಳ್ಳಿದರು.
‘’ಇದು ಕಡೆಯ ಎಚ್ಚರಿಕೆ’’ ಅಂತ ‘ಬಿಗ್ ಬಾಸ್’ ಕೂಗಿದರೂ, ಅದಕ್ಕೆ ಕ್ಯಾರೆ ಎನ್ನದ ಜಗದೀಶ್, ‘’ಮಾತ್ತೆತ್ತಿದರೆ ಕೈ ಮಾಡೋಕೆ ಬರ್ತಿಯೇನೋ ನೀನು’’ ಅಂತ ರಂಜಿತ್ ಮೇಲೆ ಜಗದೀಶ್ ಕ್ಯಾತೆ ತೆಗೆದರು. ‘’ಹೊರಗಡೆ ಸಿಗೋ ನೀನು.. ಐತೆ ನಿಂಗೆ’’ ಅಂತ ರಂಜಿತ್ ಹೇಳಿದಾಗ, ‘’ಏಯ್.. ಪ್ರೋಟೀನ್ ಸಿಗದಿದ್ದರೆ… ** ** ***’’ ಅಂತ ಜಗದೀಶ್ ಮತ್ತೆ ಅವಾಚ್ಯ ಶಬ್ದ ಬಳಸಿ ಬೀಪ್ ಹಾಕಿಸಿಕೊಂಡರು. ಈ ಸಮಯದಲ್ಲಿ ರಂಜಿತ್ ಬಾಯ್ಮುಚ್ಚಿಸಿ ತ್ರಿವಿಕ್ರಮ್ ತಡೆದರು. ಆಗ, ‘’ಏನೋ ಮಾಡ್ತೀಯಾ? ನಿನ್ನೆ ಕೈ ಮಾಡಿದ್ಯಾ ನನ್ನ ಮೇಲೆ’’ ಅಂತ್ಹೇಳಿ ಮತ್ತೆ ಜಗದೀಶ್ ಬೀಪ್ ಪದ ಬಳಸಿ ನಿಂದಿಸಿದರು. ‘’ನಿನ್ನಂಥ *** ಕೆಲಸಕ್ಕೆ ಇಟ್ಕೊಳ್ತೀನಿ ನಾನು’’ ಅಂತ ಮತ್ತೆ ಅಸಭ್ಯ ಪದ ಬಳಕೆ ಮಾಡಿದರು. ‘’ಇದು ಕಡೆಯ ಎಚ್ಚರಿಕೆ’’ ಅಂತ ‘ಬಿಗ್ ಬಾಸ್’ ಹೇಳುತ್ತಿದ್ದರೂ ಸುಮ್ಮನಾಗಲಿಲ್ಲ. ಇದು ‘ಬಿಗ್ ಬಾಸ್’ಗೂ ಅವಮಾನ ಮಾಡಿದ ಹಾಗಾಯ್ತು!
ಕಠಿಣ ಕ್ರಮ ಕೈಗೊಂಡ ‘ಬಿಗ್ ಬಾಸ್’
ಇಷ್ಟೆಲ್ಲಾ ಕೋಲಾಹಲ ಜರುಗಿದ್ಮೇಲೆ ಕ್ಯಾಪ್ಟನ್ ಶಿಶಿರ್, ಗೋಲ್ಡ್ ಸುರೇಶ್, ಜಗದೀಶ್ ಅವರಿಂದ ‘ಬಿಗ್ ಬಾಸ್’ ವಿವರಣೆ ಪಡೆದರು. ಎಲ್ಲಾ ಸ್ಪರ್ಧಿಗಳ ಅಭಿಪ್ರಾಯವನ್ನೂ ಕೇಳಿದರು. ಜಗದೀಶ್ ವಿರುದ್ಧ ಎಲ್ಲರೂ ತಮ್ಮ ಅಸಮಾಧಾನವನ್ನ ಹೊರಹಾಕಿದರು. ಪರಿಣಾಮ, ‘’ಮಹಿಳೆಯರಿಗೆ ನಿಂದನೆ, ಅಪಮಾನ ಸಹಿಸುವುದಿಲ್ಲ’’ ಅಂತ್ಹೇಳಿ ಜಗದೀಶ್ರನ್ನ ಮತ್ತು ‘’ದೈಹಿಕ ಹಲ್ಲೆ ಅಕ್ಷಮ್ಯ’’ ಅಂತ್ಹೇಳಿ ರಂಜಿತ್ ಅವರನ್ನ ‘’ಕೂಡಲೆ ಹೊರಗೆ ಬನ್ನಿ…’’ ಎಂದು ‘ಬಿಗ್ ಬಾಸ್’ ಆದೇಶಿಸಿದರು.
ಅಂದ್ಹಾಗೆ, ‘’ಇಬ್ಬರೂ ಕೂಡಲೆ ಹೊರಗೆ ಬನ್ನಿ’’ ಅಂತ ‘ಬಿಗ್ ಬಾಸ್’ ಆದೇಶಿಸಿರುವುದನ್ನ ಮುಂದಿನ ಸಂಚಿಕೆಯ ಪ್ರೋಮೋದಲ್ಲಿ ಹಾಕಲಾಗಿದೆ. ಶುಕ್ರವಾರದ ಸಂಚಿಕೆಯಲ್ಲಿ ಇದು ಪ್ರಸಾರವಾಗಲಿದೆ.