ಈಗಾಗಲೇ 4 ಬಾರಿ ನ್ಯಾಷನಲ್ ಅವಾರ್ಡ್ ಪಡೆದಿರುವುದು ನಟಿ ಕಂಗನಾ ರಣಾವತ್ ಅವರ ಹೆಚ್ಚುಗಾರಿಕೆ. ಈಗ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರವನ್ನು ಮಾಡಿದ್ದು, ಈ ಬಾರಿ ಕೂಡ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ಎಮರ್ಜೆನ್ಸಿ’ ಸಿನಿಮಾದ ಟ್ರೇಲರ್.
ನಟಿ ಕಂಗನಾ ರಣಾವತ್ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ‘ಎಮರ್ಜೆನ್ಸಿ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಸೆಪ್ಟೆಂಬರ್ 6ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಂದು ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರಕ್ಕೆ ಕಂಗನಾ ರಣಾವತ್ ಬಣ್ಣ ಹಚ್ಚಿದ್ದಾರೆ. ಟ್ರೇಲರ್ನಲ್ಲಿ ಅವರ ನಟನೆಯನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾಗೆ ಸ್ವತಃ ಕಂಗನಾ ರಣಾವತ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕಂಗನಾ ಅವರು ಈ ಸಿನಿಮಾ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ. ಎಲ್ಲವೂ ಪ್ಲ್ಯಾನ್ ಪ್ರಕಾರವೇ ನಡೆದಿದ್ದರೆ ಈಗಾಗಲೇ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಯಿತು. ಅಂತಿಮವಾಗಿ ಸೆಪ್ಟೆಂಬರ್ 6ರಂದು ಈ ಸಿನಿಮಾ ತೆರೆಗೆ ಬರಲಿದೆ. ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ಮಿಲಿಂದ್ ಸೋಮನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕಂಗನಾ ಅಭಿಮಾನಿಗಳಿಂದ ಟ್ರೇಲರ್ಗೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ.
ಕಂಗನಾ ರಣಾವತ್ ಅವರು ಈಗ ಸಂಸದೆಯಾಗಿ ಫುಲ್ಟೈಮ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಕೂಡ ರಾಜಕೀಯದ ಕಥೆ ಇದೆ. ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ರಾಜಕೀಯದ ಕಾರಣದಿಂದ ಈ ಸಿನಿಮಾ ಒಂದಷ್ಟು ವಿವಾದಗಳನ್ನು ಹುಟ್ಟುಹಾಕುವ ಸಾಧ್ಯತೆ ಕೂಡ ಇದೆ. ಬಿಡುಗಡೆ ಆದ ಬಳಿಕ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದುನೋಡಬೇಕು.