ಕೊಪ್ಪಳ: ಕರ್ನಾಟಕದಲ್ಲಿ ಇನ್ನೊಂದು ಅಣುಸ್ಥಾವರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಸ್ಥಳ ಹುಡುಕಾಟ ನಡೆಸಿತ್ತು. ಸದ್ಯ ಕೊಪ್ಪಳ ತಾಲೂಕಿನ ಅರಸಿಕೇರಿ ಗ್ರಾಮದಲ್ಲಿ ಅಣುಸ್ಥಾವರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಜಾಗ ಆಯ್ಕೆ ಮಾಡಿಕೊಂಡಿದೆ.
ಪರಮಾಣು ಸ್ಥಾವರ ಆರಂಭಕ್ಕೆ 1200 ಎಕರೆ ಭೂಮಿ ಅಗತ್ಯವಿದೆ. ಆದರೆ ಅರಸಿನಕೇರಿ ಬಳಿ ಲಭ್ಯವಿರುವುದು 615-35 ಎಕರೆ ಭೂಮಿ ಮಾತ್ರ. ಹೀಗಾಗಿ ಸುತ್ತಮುತ್ತಲು, ಜನವಸತಿ ಪ್ರದೇಶದಿಂದ ಕನಿಷ್ಠ 3 ಕಿ.ಮೀ ದೂರದಲ್ಲಿ ಲಭ್ಯವಿರಬಹುದಾದ ಉಳಿದ ಜಾಗದ ಮಾಹಿತಿ ಸಂಗ್ರಹಿಸಿ ವರದಿ ನೀಡಿ ಎಂದು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.ಈ ಹಿನ್ನೆಲೆಯಲ್ಲಿ ಕೊಪ್ಪಳ ತಹಸೀಲ್ದಾರ್ಗೆ ಪತ್ರ ಬರೆದಿರುವ ಜಿಲ್ಲಾಡಳಿತ, ಸ್ಥಳ ತನಿಖೆ ಮಾಡಿ ಪರಮಾಣು ವಿದ್ಯುತ್ ಸ್ಥಾವರಕ್ಕೆ ಅಗತ್ಯವಾದ ಭೂಮಿ ಲಭ್ಯವಿದ್ದರೆ ಈ ಕುರಿತು ಪಂಚನಾಮ ಮತ್ತು ಕಂದಾಯ ನಕ್ಷೆಯೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಅಣು ಸ್ಥಾವರ ಸ್ಥಾಪನೆಗೆ 1,200 ಎಕರೆ ಜಾಗ ಬೇಕಾಗಿದ್ದು, ಸದ್ಯ 615 ಎಕರೆ ಲಭ್ಯವಿದೆ. ಇನ್ನುಳಿದ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೇಂದ್ರದಿಂದ ಸೂಚನೆ ಬಂದಿದೆ. ಈ ಭಾಗದಲ್ಲಿ ಹೆಚ್ಚಿನ ಕಾಡು ಪ್ರಾಣಿಗಳು ವಾಸ ಸ್ಥಾನವಾಗಿದೆ. ಕರಡಿ, ಜಿಂಕೆ, ಮೊಲ, ಕತ್ತೆ ಕಿರುಬ ಸೇರಿ ಹಲವು ಪ್ರಾಣಿಗಳು ವಾಸ ಮಾಡುತ್ತಿದೆ.
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಾಗದ ಪೈಕಿ ಶೇ.90ರಷ್ಟು ಸರ್ಕಾರಿ ಭೂಮಿಯೇ ಇರುವ ಪ್ರದೇಶವಾಗಿದ್ದು, ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಅರಣ್ಯ ಪ್ರದೇಶದಲ್ಲಿಯೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಹಾಗೂ ಅಪಾಯಕಾರಿಯಾಗಿರುವ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಮುಂದಾಗಿರುವುದು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ಈಗಾಗಲೇ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ. ಬಳಿಕ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯನ್ನು ಸ್ಥಾವರಕ್ಕಾಗಿ ಗುರುತಿಸಲಾಗಿತ್ತು. ಆದರೆ ಇದೀಗ ಕೊಪ್ಪಳ ಹೆಚ್ಚು ಸೂಕ್ತ ಎನ್ನುವ ಕಾರಣಕ್ಕೆ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಸರ್ವೇ ಮಾಡುವ ಕಾರ್ಯಕ್ಕೆ ಕಂದಾಯ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಸರ್ವೇ ನಡೆಸಿ, ಕೇಂದ್ರಕ್ಕೆ ವರದಿ ನೀಡಲಿದೆ.
ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರದಿಂದ ಪ್ರಸ್ತಾವನೆ ಬಂದಿರುವ ಹಿನ್ನೆಲೆಯಲ್ಲಿ ಸರ್ವೇ ನಡೆಸಲು ತಹಸೀಲ್ದಾರ್ಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಸರ್ವೇ ಮಾಡಿ, ವರದಿ ಕಳುಹಿಸುತ್ತೇವೆ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ತಿಳಿಸಿದ್ದಾರೆ.
ಅತ್ಯಂತ ಅಪಾಯಕಾರಿಯಾಗಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಸ್ಥಾಪಿಸಲು ನಾವು ಬಿಡುವುದಿಲ್ಲ. ಇದಕ್ಕಾಗಿ ಆತ್ಮಹತ್ಯೆಯಂತಹ ಹೋರಾಟಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದು ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ತಿಳಿಸಿದ್ದಾರೆ.