ಶಿವಮೊಗ್ಗ: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ, ವಾರದ 6 ದಿನವೂ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಲ್ಯಾಪ್ ಟಾಪ್ ವಿತರಿಸಿ ಹಾಗೂ ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರನ್ನು ಅಭಿನಂದಿಸಿ ಮಾತನಾಡಿದರು. ‘ಈ ಮೊದಲು ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ವಾರಕ್ಕೊಮ್ಮೆ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಅದನ್ನು 10ನೇ ತರಗತಿಯವರೆಗೆ ವಿಸ್ತರಿಸಿದೆ. ವಾರದಲ್ಲಿ ಒಂದು ದಿನದ ಬದಲು ಎರಡು ದಿನಕ್ಕೆ ಹೆಚ್ಚಿಸಲಾಗಿತ್ತು. ಇನ್ನು ವಾರವಿಡೀ ವಿತರಿಸಲಾಗುವುದು’ ಎಂದರು.
ರಾಜ್ಯದಲ್ಲಿ 50,000 ಶಿಕ್ಷಕರ ಕೊರತೆ ಇದೆ. 45,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಈ ವರ್ಷ 10,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಅನುದಾನಿತ ಶಾಲೆಗಳ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.ಈ ವರ್ಷ ರಾಜ್ಯದಲ್ಲಿ 1,600 ಶಾಲೆಗಳ ಕೊಠಡಿಗಳ ದುರಸ್ತಿ ಗುರಿ ಹೊಂದಲಾಗಿದೆ. ಅಗತ್ಯವಿರುವ ಕಡೆ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಮಂಜೂರಾತಿ ನೀಡಲಾಗುವುದು. ಹೊಸದಾಗಿ 500 ಕೆಪಿಎಸ್ ಶಾಲೆಗಳನ್ನು ತೆರೆಯಲು ಮೊದಲು ಉದ್ದೇಶಿಸಲಾಗಿತ್ತು. ಈಗ ಅದನ್ನು 1,000ಕ್ಕೆ ಏರಿಸಲಾಗುವುದು. ಕೆಪಿಎಸ್ ಶಾಲೆಯಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ಗುರಿ ಹೊಂದಲಾಗಿದೆ ಎಂದರು.