ತಿರುಪತಿ: ಇನ್ಮುಂದೆ ತಿರುಮಲ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಹೌದು ತಿರುಮಲ ತಿಮ್ಮಪ್ಪನ ದರ್ಶನ ಪಡೆಯಲು ಈಗ ಹಲವು ಗಂಟೆಗಳ ಕಾಲ ಭಕ್ತರು ಕಾಯಬೇಕಾಗಿದೆ. ಆದರೆ ಇದೀಗ ಕೃತಕ ಬುದ್ದಿಮತೆ ಮೂಲಕ ತಂತ್ರಜ್ಞಾನ ಅಳವಡಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್.ನಾಯ್ಡು ಹೇಳಿದ್ದಾರೆ. ಇದರಿಂದಾಗಿ ಭಕ್ತರಿಗೆ ಶೀಘ್ರವೇ ತಿಮ್ಮಪ್ಪನ ದರ್ಶನ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಭಕ್ತರೂ ಭಗವಾನ್ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಒಂದು ಗಂಟೆಯೊಳಗೆ ಪಡೆಯುವಂತಾಗಬೇಕು ಎಂಬುದು ನಮ್ಮ ಮಹತ್ವದ ಗುರಿಯಾಗಿದೆ. ಇದನ್ನು ನಾವು ಸಾಧಿಸುತ್ತೇವೆ. .ವಿಮಾನ । ನಿಲ್ದಾಣದಲ್ಲಿ ಉಪಯೋಗಿಸಲ್ಪಡುವ ಯಾತ್ರಾ ವ್ಯವಸ್ಥೆಯ ತಂತ್ರಜ್ಞಾನದಿಂದ ಪ್ರಭಾವಿತರಾಗಿ ನಾವು ಎಐ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದ್ದೇವೆ. ಹೀಗೆ ಎಐ ತಂತ್ರಜ್ಞಾನ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಲಿಪಿರಿ ಸೇರಿದಂತೆ ನಿಗದಿಪಡಿಸಿದ 20 ಆಯಕಟ್ಟಿನ ಸ್ಥಳಗಳಲ್ಲಿ ಭಕ್ತರ ಮುಖಗಳನ್ನು ಸ್ಕ್ಯಾನ್ ಮಾಡುತ್ತದೆ. ಅದು ದರ್ಶನದ ಕರಾರುವಕ್ ಸಮಯವನ್ನು ನಿಗದಿಪಡಿಸಲಿದ್ದು, ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಕೇವಲ ಒಂದು ಗಂಟೆಯೊಳಗೆ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ ಎಂದು ನಾಯ್ಡು ಅವರು ವಿವರಿಸಿದ್ದಾರೆ.
ಒಂದು ಬಾರಿ ಈ ನೂತನ ಎಐ ವ್ಯವಸ್ಥೆ ಅನುಷ್ಠಾನಗೊಂಡಲ್ಲಿ ಸಾಮಾನ್ಯ ಭಕ್ತರೂ ಕೂಡಾ ಕೇವಲ ಒಂದು ಗಂಟೆಯೊಳಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಬಹುದಾಗಿದೆ, ಇನ್ನು ಈ ವಿನೂತನ ವ್ಯವಸ್ಥೆಯನ್ನು ಪ್ರಸ್ತುತ ಬೆಂಗಳೂರು ಮೂಲದ ಕಂಪನಿಯು ಡೆಮೋ ಮಾಡುತ್ತಿದೆ. ಎಂದು ನಾಯ್ಡು ಅವರು ತಿಳಿಸಿದ್ದಾರೆ.