ಕೀರ್ತಿ ಸುರೇಶ್ ನಟನೆಯ ‘ರಘುತಾತ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಈಗಾಗಲೇ ಪ್ರಮೋಷನ್ ಶುರುವಾಗಿದೆ. ‘ಮಹಾನಟಿ’ ಆಗಿ ಸಕ್ಸಸ್ ಕಂಡ ಕೀರ್ತಿ ಮತ್ತೊಮ್ಮೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಸೆಲೆಬ್ರೆಟಿಗಳು ಯಾವಾಗ ಯಾಕೆ ಟ್ರೋಲ್ ಆಗುತ್ತಾರೆ ಎಂದು ಹೇಳುವುದು ಕಷ್ಟ. ಇದೀಗ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ಕೊಟ್ಟ ಉತ್ತರವೊಂದು ಆಕೆ ಮೇಲೆ ಕೆಲವರು ಗರಂ ಆಗುವಂತೆ ಮಾಡಿದೆ.
ಮಲಯಾಳಂ ಬೆಡಗಿ ಕೀರ್ತಿ ಸುರೇಶ್ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ಕೀರ್ತಿ ನಟನೆಯ ಹಿಂದಿ ಸಿನಿಮಾ ‘ಬೇಬಿ ಜಾನ್’ ಡಿಸೆಂಬರ್ನಲ್ಲಿ ತೆರೆಗೆ ಬರಲಿದೆ. ಇನ್ನು ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ಬಗ್ಗೆ ಮಾತನಾಡುತ್ತಲೇ ಮಹಿಳೆ ಸ್ವಾವಲಂಬಿಯಾಗಿ ಬದುಕಿ ಸಾಧಿಸುವ ಕಥೆಯನ್ನು ‘ರಘುತಾತ’ ಚಿತ್ರದಲ್ಲಿ ಹೇಳಲಾಗುತ್ತಿದೆ. ಸದ್ಯ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ತೆಲುಗು ನಟ ಚಿರಂಜೀವಿ ಬಗ್ಗೆ ನೀಡಿದ ಹೇಳಿಕೆ ಕೆಲವರ ಬೇಸರಕ್ಕೆ ಕಾರಣವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಡ್ಯಾನ್ಸ್ ಬಗ್ಗೆ ಹೇಳುವುದೇ ಬೇಕಾಗಿಲ್ಲ. ಸಾಕಷ್ಟು ಯುವ ನಟರಿಗೆ ಚಿರು ಡ್ಯಾನ್ಸ್ ದೊಡ್ಡ ಸ್ಫೂರ್ತಿ. ಮೆಗಾಸ್ಟಾರ್ ಡ್ಯಾನ್ಸ್ ನೋಡಿ ನಮಗೂ ಡ್ಯಾನ್ಸ್ ಬಗ್ಗೆ ಒಲವು ಮೂಡಿತು ಎಂದು ಹಲವು ನಟ-ನಟಿಯರು ಹೇಳಿದ್ದಾರೆ. ವಯಸ್ಸು 60 ದಾಟಿದರೂ ಚಿರಂಜೀವಿ ಸ್ಟೆಪ್ಸ್ ಎಂಥಹವರಿಗೂ ಅಚ್ಚರಿ ಮೂಡಿಸುತ್ತದೆ. ಆ ಗ್ರೇಸ್, ಸ್ವ್ಯಾಗ್ ನಿಜಕ್ಕೂ ಗ್ರೇಟ್ ಎಂದು ಸ್ಟಾರ್ ನಟ-ನಟಿಯರೇ ಒಪ್ಪಿಕೊಂಡಿದ್ದಾರೆ. ಆದರೆ ಕೀರ್ತಿ ಸುರೇಶ್ ಸಂದರ್ಶನದಲ್ಲಿ ಮಾತನಾಡುತ್ತಾ ಚಿರಂಜೀವಿಗಿಂತ ದಳಪತಿ ವಿಜಯ್ ಬೆಸ್ಟ್ ಡ್ಯಾನ್ಸರ್ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಆಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ ಅಭಿಮಾನಿಗಳು ಮಾತ್ರ ಕೀರ್ತಿ ಬೆಂಬಲಕ್ಕೆ ನಿಂತಿದ್ದಾರೆ.