ಕೇರಳದ ತಿರುವನಂತಪುರಂನಲ್ಲಿರುವ ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನವಾದ ಅನಂತ ಪದ್ಮನಾಭಸ್ವಾಮಿ ದೇವಾಲಯದ ಹಾವಿನ ಕಥೆಗಳನ್ನು ಕೇಳಿರುತ್ತೇವೆ. ಇದೇ ರೀತಿ ಇನ್ನೂ ಕೆಲವು ದೇವಾಲಯಗಳ ನಿಧಿಯನ್ನು ಹಾವು ಕಾಯುತ್ತಿದೆ ಎಂಬ ನಂಬಿಕೆಯಿದೆ. ಅಂತಹ ಕೆಲವು ದೇವಸ್ಥಾನಗಳಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯವೂ ಒಂದು. 4 ದಶಕಗಳ ಬಳಿಕ ನಾಳೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಕೋಣೆಯನ್ನು ತೆರೆಯಲಾಗುತ್ತಿದೆ. ಈ ಕ್ಷಣಕ್ಕೆ ಎಲ್ಲರೂ ಕಾತುರದಿಂದ, ಅಚ್ಚರಿಯಿಂದ ಕಾಯುತ್ತಿದ್ದಾರೆ.
ಭಗವಾನ್ ಜಗನ್ನಾಥ ಮತ್ತು ಪುರಿಯಲ್ಲಿರುವ ದೇವಾಲಯದ ಇತರ ದೇವತೆಗಳ ಬೆಲೆಬಾಳುವ ವಸ್ತುಗಳನ್ನು ಸರ್ಪಗಳ ಗುಂಪು ಬಹಳ ನಿಷ್ಠೆಯಿಂದ ಕಾಪಾಡುತ್ತವೆ ಎಂಬ ದಂತಕಥೆಗಳಿವೆ. 6 ವರ್ಷಗಳ ಹಿಂದೆ, 2018ರಲ್ಲಿ ಒಡಿಶಾ ಹೈಕೋರ್ಟ್ನ ಆದೇಶದ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಜಂಟಿ ತಂಡ ಮತ್ತು ಪುರಿಯ ಜಗನ್ನಾಥ ದೇವಾಲಯದ ಅಧಿಕಾರಿಗಳು ಅದರ ರಚನಾತ್ಮಕ ಸ್ಥಿತಿಯನ್ನು ಪರಿಶೀಲಿಸಲು ರತ್ನ ಭಂಡಾರಕ್ಕೆ ತೆರಳಿದರು.
1985ರ ನಂತರ ಮೊದಲ ಬಾರಿಗೆ ನಾಳೆ ಭಂಡಾರ ಅಥವಾ ಆಂತರಿಕ ರಹಸ್ಯ ಕೋಣೆಯನ್ನು ತೆರೆಯಲಾಗುತ್ತಿದೆ. ಹೀಗಾಗಿ ಹಾವು ಹಿಡಿಯುವವರನ್ನು ರತ್ನ ಭಂಡಾರದಲ್ಲಿ ನಿಯೋಜಿಸಲಾಗುವುದು. ವೈದ್ಯರ ತಂಡವು ಔಷಧಿ ಕಿಟ್ನೊಂದಿಗೆ ಸಿದ್ಧವಾಗಿ ಇರುತ್ತದೆ.
ರತ್ನ ಭಂಡಾರದಲ್ಲಿರುವ ಪುರಾತನ ಬೆಲೆಬಾಳುವ ವಸ್ತುಗಳ ವಿಧಗಳನ್ನು ತಿಳಿದುಕೊಳ್ಳುವ ಕುತೂಹಲವಿದ್ದರೂ, ಹಾವುಗಳಿರುವ ಸಾಧ್ಯತೆಯ ಬಗ್ಗೆ ನಮಗೆ ಭಯವಿದೆ ಎಂದು ರತ್ನ ಭಂಡಾರವನ್ನು ತೆರೆಯಲು ಬಿಜೆಪಿ ಸರ್ಕಾರಕ್ಕೆ ಪ್ರಸ್ತಾಪಿಸಿದ ಸಮಿತಿಯ ಸೇವಕರೊಬ್ಬರು ಹೇಳಿದ್ದಾರೆ.
ಇದು ಪುರಾತನವಾದ ದೇವಾಲಯವಾಗಿರುವುದರಿಂದ ಹಲವೆಡೆ ಸಣ್ಣ ರಂಧ್ರಗಳು ಮತ್ತು ಬಿರುಕುಗಳಿದ್ದು, ರಂಧ್ರಗಳ ಮೂಲಕ ಹಾವುಗಳು ರತ್ನ ಭಂಡಾರಕ್ಕೆ ನುಗ್ಗುವ ಸಾಧ್ಯತೆಯಿದೆ ಎಂದು ಮತ್ತೊಬ್ಬ ಸೇವಕ ಹರೇಕೃಷ್ಣ ಮಹಾಪಾತ್ರ ಹೇಳಿದ್ದಾರೆ.
ಇವು ಕೇವಲ ವದಂತಿಗಳು ಮತ್ತು ರತ್ನ ಭಂಡಾರದಲ್ಲಿ ಈ ರೀತಿಯ ಏನೂ ಇಲ್ಲ” ಎಂದು ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಭಾಸ್ಕರ್ ಮಿಶ್ರಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ರಾಜರ ಕಿರೀಟಗಳು ಮತ್ತು ಸಿಂಹಾಸನಗಳು ಸೇರಿದಂತೆ ಬೆಲೆಬಾಳುವ ವಸ್ತುಗಳಿಂದ ತುಂಬಿರುವ ಕೋಣೆಯನ್ನು ಕಾಪಾಡಲು ಈ ರೀತಿಯ ದಂತಕತೆಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.
1985ರಲ್ಲಿ ಈ ರಹಸ್ಯ ಒಳಕೋಣೆಗೆ ಪ್ರವೇಶಿಸಿದ 6 ಜನರಲ್ಲಿ ಒಬ್ಬರಾದ ರವೀಂದ್ರ ನಾರಾಯಣ ಮಿಶ್ರಾ ಕೂಡ ಇದೇ ಮಾತನ್ನು ಹೇಳಿದ್ದರು. ಆ ಕತ್ತಲೆಯ ಕೋಣೆಗಳಲ್ಲಿ ಯಾವುದೇ ಹಾವುಗಳು, ಸರೀಸೃಪಗಳು ಅಥವಾ ಜೇಡರ ಬಲೆಗಳನ್ನು ನಾನು ನೋಡಲಿಲ್ಲ ಎಂದು ಅವರು ಹೇಳಿದ್ದರು.
2018ರಲ್ಲಿ 16 ಜನರ ಗುಂಪು ರತ್ನ ಭಂಡಾರವನ್ನು ಪರಿಶೀಲಿಸಲು ಪ್ರಯತ್ನಿಸಿತು. ಆದರೆ ಭಂಡಾರದ ಕೀಗಳ ಕೊರತೆಯಿಂದಾಗಿ ಆ ಪ್ರಯತ್ನ ವಿಫಲವಾಯಿತು. ಈ ವೈಫಲ್ಯವು ಒಳಗಿನ ಕೋಣೆಯಲ್ಲಿ ಇರಿಸಲಾಗಿದೆ ಎಂದು ನಂಬಲಾದ ನಿಧಿಗಳ ಸುತ್ತಲಿನ ನಿಗೂಢತೆಯನ್ನು ಹೆಚ್ಚಿಸಿತು. ಹೀಗಾಗಿ, ನಾಳೆಯ ಪ್ರಯತ್ನವು ಇನ್ನಷ್ಟು ಮಹತ್ವ ಪಡೆದುಕೊಂಡಿದೆ.