ರಾಜಸ್ಥಾನದ ಜೈಪುರ ಪೊಲೀಸರು ಒಂದು ವಿಭಿನ್ನವಾದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆಗಸ್ಟ್ 18 ರಂದು ಕಿಡ್ನಾಪ್ ಆಗಿದ್ದ ಅನುಜ್ ಎಂಬ ಯುವಕನನ್ನು ರಕ್ಷಿಸುವಲ್ಲಿ ಹಾಗೂ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನುಜ್ನನ್ನು ಕಿಡ್ನಾಪ್ ಮಾಡಿದ ಕಿರಾತಕರು ಅವನ ಪೋಷಕರಿಗೆ ಕರೆ ಮಾಡಿ 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆಯೊಡ್ಡಿದ್ದರು. ಅನುಜ್ನನ್ನು ಕರೆದುಕೊಂಡು ಹೋಗಿ ಹಿಮಾಚಲ ಪ್ರದೇಶದಲ್ಲಿ ಸಲೂನ್ ಎಂಬ ಹೋಟೆಲ್ನಲ್ಲಿ ಬಚ್ಚಿಟ್ಟಿದ್ದರು.
ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಇಳಿದ ಪೊಲೀಸರು ಅನುಜ್ನನ್ನು ಪತ್ತೆ ಹಚ್ಚಿದ್ದಾರೆ. ಹೋಟೆಲ್ಗೆ ಬಂದ ಪೊಲೀಸರು ಮಲಗಿದ್ದ ಅನುಜ್ನನ್ನು ಹಲೋ ಅನುಜ್, ವಿ.ಆರ್ ಜೈಪುರ್ ಪೊಲೀಸ್ ಎಂದು ಹೇಳಿದ್ದಾರೆ. ಪೊಲೀಸರು ಅನುಜ್ನನ್ನು ಕೂಗಿ ಎಬ್ಬಿಸಿದ ಹಾಗೂ ಪೊಲೀಸರನ್ನು ಕಂಡ ಅನುಜ್ನ ಎಕ್ಸ್ಪ್ರೆಷನ್ನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಸಾಹಸಕ್ಕೆ ಭೇಷ್ ಎನ್ನುತ್ತಿದ್ದಾರೆ. ಅಪಹರಣ ಮಾಡಿದ ಆರೋಪಿಗಳಲ್ಲಿ ಮಾಸ್ಟರ್ ಮೈಂಡ್, ಸಾಪ್ಟ್ವೇರ್ ಇಂಜನಿಯರ್ ವಿರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಅವನ ಜೊತೆ, ವಿನೋದ್ ಸಿಂಗ್, ಅಮಿತ್ ಸಿಂಗ್, ಜಿತೇಂದ್ರ ಸಿಂಗ್ ಹಾಗೂ ಜಮುನಾ ಸರ್ಕಾರ್ ಎಂಬ ವಿರೇಂದ್ರನ ಸಹಚರರನ್ನು ಕೂಡ ಬಂಧಿಸಲಾಗಿದೆ.
ಅನುಜ್ನನ್ನು ಅತ್ಯಂತ ಶ್ರೀಮಂತ ಕುಟುಂಬದ ಪುತ್ರ ಎಂದು ನಂಬಿ ಈ ವಿರೇಂದ್ರ ಆ್ಯಂಡ್ ಟೀಂ ಕಿಡ್ನಾಪ್ ಮಾಡಿತ್ತು ಎನ್ನಲಾಗಿದೆ. ಆದ್ರೆ ಅಪಹರಣಕಾರರ ದುರಾದೃಷ್ಟಕ್ಕೆ, ಅನುಜ್ ಶ್ರೀಮಂತ ಕುಟುಂಬದ ಹುಡುಗನಾಗಿರಲಿಲ್ಲ. ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದ ವೇಳೆ ಆತ ಶ್ರೀಮಂತ ಕುಟುಂಬದ ಮಗನಿರಬೇಕು ಎಂದು ಭಾವಿಸಿ ಕಿಡ್ನಾಪ್ ಮಾಡಿ, ಹೋಟೆಲ್ನಲ್ಲಿ ಬಚ್ಚಿಟ್ಟಿದ್ದರು. ಕೊನೆಗೂ ಜೈಪುರ ಪೊಲೀಸರು ಯುವಕನನ್ನು ರಕ್ಷಿಸಿ, ಅಪಹರಣಕಾರರನ್ನು ಕಂಬಿ ಹಿಂದೆ ತಳ್ಳಿದ್ದಾರೆ.