ಚನ್ನಪಟ್ಟಣದಲ್ಲಿ ಮೆಗಾ ಆಪರೇಷನ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಎಚ್ಡಿ ಕುಮಾರಸ್ವಾಮಿ ಶಾಕ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಆಪ್ತೆ ಮಾಜಿ ನಗರಸಭೆ ಸದಸ್ಯೆ ಗೀತಾ ಶಿವರಾಮ್ರನ್ನ ಎಚ್ಡಿಕೆ ಜೆಡಿಎಸ್ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಚನ್ನಪಟ್ಟಣದ ತಮ್ಮ ನಿವಾಸದಲ್ಲಿ ಗೀತಾ ಶಿವರಾಮ್ ಪಕ್ಷ ಸೇರ್ಪಡೆ ಆಗಿದ್ದು, ಗೀತಾ ಅವರೊಂದಿಗೆ ಕುರುಬ ಸಮುದಾಯದ ನೂರಾರು ಜನ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಎಚ್ಡಿ ಕುಮಾರಸ್ವಾಮಿ ಅವರೇ ಗೀತಾ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ. ವಿಶೇಷ ಎಂದರೇ ಈ ವೇಳೆಯೂ ಸಿಎಂ ಸಿದ್ದರಾಮಯ್ಯ ಅವರ ಬೃಹತ್ ಫೋಟೋ ಗೀತಾ ಅವರ ಮನೆಯಲ್ಲಿ ಅಳವಡಿಸಲಾಗಿದ್ದು, ಸಿದ್ದರಾಮಯ್ಯ ಅವರ ಬೃಹತ್ ಫೋಟೋ ಎದುರೇ ಗೀತಾ ಅವರು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.
ಇದನ್ನು ಓದಿ: ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನ!
ಗೀತಾ ಶಿವರಾಮ್ ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಗೀತಾ ಶಿವರಾಮ್ ಕುರುಬ ಸಮಾಜದವರು. ಈ ಹಿಂದೆ ನಮ್ಮ ಪಕ್ಕದಲ್ಲಿಯೇ ಇದ್ದರು. ಈಗ ದೀಪಾವಳಿ ದಿನ ತಂಗಿ ಮರಳಿ ಮನೆಗೆ ಬಂದಿದ್ದಾರೆ. ತುಂಬು ಹೃದಯದಿಂದ ಸ್ವಾಗತ ಮಾಡಿದ್ದೇನೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಪರವಾದ ಟ್ರೆಂಡ್ ಇದೇ, ನಿಖಿಲ್ ಕುಮಾರಸ್ವಾಮಿ ಪರವಾಗಿ ಜನರಿದ್ದಾರೆ. ಕಾಂಗ್ರೆಸ್ ನವರು ಮೊದಲು ಗೆದ್ದಾಯ್ತು ಎಂಬ ಭಾವನೆಯಲ್ಲಿದ್ದರು, ಈಗ ಆ ವಾತಾವರಣ ಕ್ಷೇತ್ರದಲ್ಲಿ ಇಲ್ಲ. ಚನ್ನಪಟ್ಟಣಕ್ಕೆ ನಾನೇನು ಕೆಲಸ ಮಾಡಿಲ್ಲ ಅಂತಾರೆ, ನಾನು ಮಾಡಿರುವ ಕೆಲಸ ಜನರಿಗೆ ಗೊತ್ತಿದೆ, ಕಾಂಗ್ರೆಸ್ ನವರಿಂದ ನನಗೆ ಸರ್ಟಿಫಿಕೇಟ್ ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣದ ನೀರಾವರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 150 ಕೋಟಿ ಹಣ ಕೊಟ್ಟಿದೆ, ಕಾಂಗ್ರೆಸ್ ನಿಂದ ಯಾವುದೇ ಅನುದಾನ ಕೊಟ್ಟಿಲ್ಲ. ಅಂದು ಸದಾನಂದಗೌಡರು ನಿರ್ಧಾರ ಮಾಡಿದರು, 17 ಕೆರೆ ತುಂಬಿಸಿದರು ಅಂತಾರೆ. ದೇವೇಗೌಡರು ಇಗ್ಗಲೂರು ಬ್ಯಾರೇಜ್ ಕಟ್ಟದಿದ್ದರೆ ನೀರು ಎಲ್ಲಿಂದ ಬರುತ್ತಿತ್ತು. ನಾನು 14 ತಿಂಗಳು ಸಿಎಂ ಆಗಿದ್ದಾಗ 107 ಕೆರೆ ತುಂಬಿಸಿದ್ದೇವೆ. 17 ಕೆರೆ ತುಂಬಿಸಿದಕ್ಕೆ ಭಗೀರಥ ಆಂದರೆ, ನಾವು ನೀರೇ ತುಂಬಿಸಿಲ್ವಾ. ಸರ್ಕಾರದ ಕಡತದಲ್ಲಿ ದಾಖಲೆ ಇದೇ ತೆಗೆಯಲಿ ಎಂದು ಸವಾಲು ಹಾಕಿದರು.
ಚನ್ನಪಟ್ಟಣಕ್ಕೆ ಡಿ.ಕೆ ಸುರೇಶ್ ಕೊಡುಗೆ ಏನಿದೆ? ಪ್ರತಿದಿನ ಮತ್ತಿಕೆರೆ ಬಳಿ 5-10 ಲೋಡ್ ಕಲ್ಲಿನ ಬರ್ತಿದೆ, ಹೊರದೇಶಕ್ಕೆ ಹೋಗ್ತಿದೆ ಅದೇನಾ ಕೊಡುಗೆ? ಕಾಂಗ್ರೆಸ್ ನಾಯಕರು ಯಾರು ಕಣ್ಣೀರು ಹಾಕಿಲ್ವಾ? ಅವರಿಗೆ ಕಣ್ಣೀರು ಬರದಿದ್ದರೆ ಅವರು ಮನುಷ್ಯರೇ ಅಲ್ಲ, ಮನುಷ್ಯತ್ವವೂ ಇಲ್ಲ. ಸೋಲು – ಗೆಲುವು ಪ್ರತಿಯೊಬ್ಬ ರಾಜಕಾರಣಿಯ ಬದುಕಲ್ಲಿ ನಡೆಯುವ ಘಟನೆ, ಕರ್ನಾಟಕ ಇದು, ಕನ್ನಡಿಗನಾಗಿ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಉತ್ತರ ಪ್ರದೇಶದಲ್ಲಿ ಸೋತಿದ್ದಾರೆ, ರಾಹುಲ್ ಗಾಂಧಿ, ಅವರ ತಂಗಿ ಈಗ ವೈನಾಡಿಗೆ ಯಾಕೆ ಬಂದಿದ್ದಾರೆ? ಅವರು ಅಲ್ಲೇ ಹುಡುಕಬೇಕಿತ್ತು ಅಲ್ವಾ? ಮೊದಲು ನಿಮ್ಮದನ್ನ ನೋಡಿಕೊಳ್ಳಿ, ನಂತರ ನಮ್ಮದು ಹೇಳಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇದನ್ನು ಓದಿ: ಸಂಡೂರು ಸಂಗ್ರಾಮ…ರೆಡ್ಡಿ ಆಡಿದ್ದೇ ಆಟ.!
ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಗೀತಾ ಶಿವರಾಮ್, ನಾನು ದಾಸರಹಳ್ಳಿಯ ಟಿಕೆಟ್ ಆಕಾಂಕ್ಷಿಯಾಗಿದ್ದೆ. ನನ್ನನ್ನ ನಂಬಿಸಿ ಮೋಸ ಮಾಡಿದರು, ಮನೆ ಹಾಳು ಮಾಡಿದರು. ಎಂಪಿ ಎಲೆಕ್ಷನ್ ನಲ್ಲಿಯೂ ನಮ್ಮನ್ನ ನಿರ್ಲಕ್ಷ್ಯ ಮಾಡಿದರು. ನಮ್ಮನ್ನ ಕಡೆಗಣಿಸಿದ್ದಕ್ಕೆ ಜೆಡಿಎಸ್ ಸೇರಿದ್ದೇನೆ, ನಮ್ಮನ್ನ ಜೆಡಿಎಸ್ ನವರು ವಿಶ್ವಾಸಕ್ಕೆ ತೆಗೆದುಕೊಂಡು ಕರೆದಿದ್ದಾರೆ. ನಾವು ಪಕ್ಷ ಸೇರಿದ್ದೇವೆ, ಎನ್ಡಿಎ ಅಭ್ಯರ್ಥಿ ನಿಖಿಲ್ ಪರ ಕೆಲಸ ಮಾಡ್ತೇವೆ. ನಮ್ಮ ಕುರುಬ ಸಮಾಜದ ಮತಗಳನ್ನು ಹಾಕಿಸುತ್ತೇವೆ. ಆದರೆ, ಸಿದ್ದರಾಮಯ್ಯ ನವರ ಮೇಲಿನ ಅಭಿಮಾನ ಇರಲಿದೆ, ಅವರು ಹೇಳಿಕೆ ಮಾತು ಕೇಳಿ ನಮ್ಮನ್ನ ಕಡೆಗಣಿಸಿದ್ದರು ಎಂದು ಬೇಸರ ಹೊರ ಹಾಕಿದ್ದಾರೆ. (ವರದಿ: ಎಟಿ ವೆಂಕಟೇಶ್ ಪ್ರಭು, ನ್ಯೂಸ್18 ಕನ್ನಡ, ರಾಮನಗರ