ಬೆಂಗಳೂರು: ರಾಜ್ಯ ಸರ್ಕಾರದಿಂದ ಕ್ಷೇತ್ರಕ್ಕೆ ಅನುದಾನ ಸಿಗ್ತಿಲ್ಲ ಅಂತಾ ಒಂದೆಡೆ ಕಾಂಗ್ರೆಸ್ ಶಾಸಕರು ಆರೋಪ ಮಾಡ್ತಿದ್ದಾರೆ. ಇನ್ನೊಂದೆಡೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗಾರಿಕಾ ಸಚಿವರು ಹಾಗೂ ಅಧಿಕಾರಿಗಳು ವಿದೇಶ ಪ್ರವಾಸ ಮಾಡಿರುವುದು ಚರ್ಚೆಗೆ ಗ್ರಾಸವಾಗಿದ್ರು ಸಚಿವರ ವಿದೇಶ ಪ್ರವಾಸದಿಂದ ರಾಜ್ಯಕ್ಕೆ 25 ಸಾವಿರ ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ ಮೂಡಿರುವುದು ವಿಶೇಷವಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗ ಕಳೆದ ಒಂದು ವರ್ಷದಲ್ಲಿ ವಿದೇಶ ಪ್ರವಾಸ ಮಾಡಿರುವುದಕ್ಕೆ ಬರೋಬ್ಬರಿ 20 ಕೋಟಿಗೂ ಅಧಿಕ ಹಣ ಖರ್ಚಾಗಿದೆ. ಆದ್ರೆ ಸಚಿವರು-ಅಧಿಕಾರಿಗಳ ಪ್ರವಾಸದಿಂದ 50 ಕೋಟಿಗೂ ಅಧಿಕ ಬಂಡವಾಳ ರಾಜ್ಯದಲ್ಲಿ ಹೂಡಿಕೆ ಭರವಸೆ ಮೂಡಿಸಿದೆ.
ಸಚಿವರ ಪ್ರವಾಸಕ್ಕೆ ಎಷ್ಟಾಯ್ತು ಖರ್ಚು..?
ಅಮೆರಿಕಾ ಪ್ರವಾಸಕ್ಕೆ 2.15 ಕೋಟಿ ರೂ ವೆಚ್ಚ
2023 ಸೆಪ್ಟಂಬರ್ 25 ರಿಂದ ಅಕ್ಟೋಬರ್ 6 ರವರೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗ ಅಮೆರಿಕಾ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸಕ್ಕೆ 2.15 ಕೋಟಿ ರೂಪಾಯಿ ಖರ್ಚಾಗಿದೆ.
ದಾವೋಸ್ ಪ್ರವಾಸಕ್ಕೆ 14 ಕೋಟಿ ಖರ್ಚು
2024 ಜನವರಿ 15 ರಿಂದ ಜನವರಿ 19 ರವರೆಗೆ ಸ್ವಿಟ್ಜರ್ಲ್ಯಾಂಡ್ ದಾವೋಸ್ ನಲ್ಲಿ ನಡೆದ ಶೃಂದಸಭೆ ಪ್ರವಾಸಕ್ಕೆ ಎಂಬಿ ಪಾಟೀಲ್ ಹಾಗೂ ಅಧಿಕಾರಿಗಳ ನಿಯೋಗ ತೆರಳಿತ್ತು. ಈ ಪ್ರವಾಸಕ್ಕೆ 14. 75 ಕೋಟಿ ರೂ ಖರ್ಚಾಗಿದೆ.
ತೈವಾನ್ ಪ್ರವಾಸಕ್ಕೆ 8 ಲಕ್ಷ ಖರ್ಚು
2024 ಫೆಬ್ರವರಿ 20 ರಿಂದ 22 ವರಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಆಯುಕ್ತರು ಮತ್ತು ಅಧಿಕಾರಿಗಳ ನಿಯೋಗ ತೈವಾನ್ ಪ್ರವಾಸ ಮಾಡಿತ್ತು. ಇದಕ್ಕೆ 8 ಲಕ್ಷ ಖರ್ಚಾಗಿದೆ.
ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರವಾಸ 1.29 ಕೋಟಿ ಖರ್ಚು!
2024 ಜೂನ್ 23 ರಿಂದ ಜುಲೈ 6 ರ ವರೆಗೆ ಸಚಿವ ಎಂಬಿ ಪಾಟೀಲ್ ಹಾಗೂ ಅಧಿಕಾರಿಗಳ ನಿಯೋಗ ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸಕ್ಕೆ 1.29 ಕೋಟಿ ವೆಚ್ಚವಾಗಿದೆ.
ಅಮೆರಿಕಾ ಪ್ರವಾಸಕ್ಕೆ 2.59 ಕೋಟಿ ವೆಚ್ಚ
2024 ಸೆಪ್ಟಂಬರ್ 30 ರಿಂದ ಅಕ್ಟೋಬರ್ 11 ರವರೆಗೆ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗ ಅಮೆರಿಕಾ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸಕ್ಕೆ 2.59 ಕೋಟಿ ವೆಚ್ಚವಾಗಿದೆ. ಈ ಮೂಲಕ ಒಟ್ಟು 20 ಕೋಟಿ ವೆಚ್ಚವಾಗಿದೆ.
ಪ್ರವಾಸದಿಂದ ಹೂಡಿಕೆಯ ಭರವಸೆ ಸಿಕ್ಕಿದ್ದೆಷ್ಟು?
ಕೈಗಾರಿಕಾ ಸಚಿವ ಎಂಬಿ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ 20 ಕೋಟಿಗೂ ಅಧಿಕ ಖರ್ಚು ಮಾಡಿ ವಿದೇಶಿ ಪ್ರವಾಸ ಮಾಡಿದ ಸಂದರ್ಭದಲ್ಲಿ ವಿವಿಧ ದೇಶಗಳಲ್ಲಿ ಕಂಪನಿಗಳಿಂದ ಹೂಡಿಕೆಯ ಭರವಸೆ ಸಿಕ್ಕಿದೆ. ಈ ಪೈಕಿ ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ 25,000 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದೆ. ಇದರಿಂದ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.
ಇನ್ನು ದಾವೋಸ್ ಪ್ರವಾಸದ ಸಂದರ್ಭದಲ್ಲಿ 15,000 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದ್ದು, 20,000 ಉದ್ಯೋಗ ಸೃಷ್ಟಿಯಾಗುವ ಅವಕಾಶ ಇದೆ. ಇನ್ನು ತೈವಾನ್ ಪ್ರವಾಸದ ಸಂದರ್ಭದಲ್ಲಿ 1490 ಕೋಟಿ ಹೂಡಿಕೆ ಭರವಸೆ ಸಿಕ್ಕಿದ್ದು, 1070 ಉದ್ಯೋಗ ಸೃಷ್ಟಿಯ ಸಾಧ್ಯತೆ ಇದೆ.
ಒಟ್ಟು 64,675 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದ್ದು, 22,520 ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ. ಈ ಯೋಜನೆಗಳು ಬೃಹತ್ ಕೈಗಾರಿಕೆಗಳಾಗಿರುವುದರಿಂದ ಇದರ ಸ್ಥಾಪನೆಗೆ 3 ರಂದ 4 ವರ್ಷ ಕಾಲಾವಕಾಶ ಬೇಕಾಗಿದೆ.