ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಪಾಕಿಸ್ತಾನಕ್ಕೆ ಆಗಮಿಸಿರುವ ಮೂವರು ರೋಗಿಗಳಲ್ಲಿ ಮಂಕಿ ಪಾಕ್ಸ್ ವೈರಸ್ ಪತ್ತೆ ಆಗಿದೆ ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಆರೋಗ್ಯ ಇಲಾಖೆ ತಿಳಿಸಿದೆ. ಈ ಬೆಳವಣಿಗೆ ಭಾರತದ ಪಾಲಿಗೂ ಆತಂಕ ತಂದೊಡ್ಡಿದೆ
ಇದೊಂದು ವೈರಲ್ ಸೋಂಕಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಇದರ ಗಂಭೀರತೆಯನ್ನು ಆಧರಿಸಿ ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಡಿ ಪರಿಗಣಿಸಿದೆ. ಈ ರೋಗಿಗಳಲ್ಲಿ ವೈರಸ್ನ ಯಾವ ರೂಪಾಂತರವು ಪತ್ತೆಯಾಗಿದೆ ಎಂಬುದು ಇನ್ನಷ್ಟೇ ದೃಢಪಡಬೇಕಿದೆ. ರೋಗಿಗಳ ರಕ್ತದ ಮಾದರಿಗಳನ್ನು ಇಸ್ಲಾಮಾಬಾದ್ನಲ್ಲಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ದೃಢೀಕರಣಕ್ಕಾಗಿ ಕಳುಹಿಸಲಾಗಿದೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಂಕಿ ಪಾಕ್ಸ್ ವೈರಸ್ ಪೀಡಿತ ಮೂವರನ್ನೂ ಕ್ವಾರಂಟೈನ್ ಮಾಡಲಾಗಿದೆ. 2023 ರ ಜನವರಿಯಲ್ಲಿ ಕಾಂಗೋದಲ್ಲಿ 27,000ಮಂಕಿ ಪಾಕ್ಸ್ ವೈರಸ್ ಪ್ರಕರಣಗಳು ಪತ್ತೆಯಾಗಿ 1,100 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಸು ನೀಗಿದ್ದರು.