ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣದಿಂದ ಬಹಳಷ್ಟು ಮಹಿಳೆಯರು ಅನುಕೂಲ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಈ ಹಿಂದೆ ಮಹಿಳೆಯರು ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಮೊಬೈಲ್, ಕಣ್ಣಿನ ಶಸ್ತ್ರಚಿಕಿತ್ಸೆ, ಫ್ರಿಡ್ಜ್, ಹೋಳಿಗೆ ಊಟ, ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಹಿರೇಬಿಡನಾಳ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ದೇವಸ್ಥಾನ ನಿರ್ಮಾಣಕ್ಕೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಹಿರೇಬೀಡನಾಳ ಗ್ರಾಮದ ಮಹಿಳೆಯರು ಶ್ರೀ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಒಂದು ತಿಂಗಳ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ. ಈ ಕುರಿತು ಸಚಿವ ಲಕ್ಷ್ಮಿ ಹೆಬ್ಬಾಳ್ಳ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಮಹಿಳೆಯರ ನಡೆಯನ್ನು ಪ್ರಶಂಶಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 100ಕ್ಕೂ ಅಧಿಕ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಈ ಪೈಕಿ 50ಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ದೇವಸ್ಥಾನ ಕಮಿಟಿಯವರಿಗೆ ತಲಾ 2 ಸಾವಿರ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ತಮ್ಮ ಖಾತೆಗೆ ಹಣ ಜಮೆಯಾದ ಬಳಿಕ ಒಬ್ಬೊಬ್ಬರಾಗಿ ದೇವಸ್ಥಾನಕ್ಕೆ ತೆರಳಿ ಕಮಿಟಿಯವರಿಗೆ ದೇಣಿಗೆ ನೀಡುತ್ತಿದ್ದಾರೆ. ಮೂರು ತಿಂಗಳ ಪೈಕಿ ಒಂದು ತಿಂಗಳ ಹಣ 15 ದಿನದ ಹಿಂದೆ ಬಂದಿದೆ. ಅದೇ ಹಣ ಡ್ರಾ ಮಾಡಿಕೊಂಡು ದೇವಸ್ಥಾನ ನಿರ್ಮಾಣಕ್ಕೆ ನೀಡಿದ್ದೇವೆ. ಯಾರ ಒತ್ತಡವಿಲ್ಲದೆ ಹಣ ನೀಡುತ್ತಿದ್ದೇವೆ. ಎಂದು ಮಹಿಳೆಯರು ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರೇಬಿಡನಾಳ ಗ್ರಾಮದ ಮಹಿಳೆಯರು ಒಂದು ತಿಂಗಳ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ನೀಡಿರುವ ಸುದ್ದಿ ಕೇಳಿ ಖುಷಿಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಇಷ್ಟೊಂದು ಸಮರ್ಪಕವಾಗ ಬಳಕೆಯಾಗುತ್ತಿರುವುದು ಸಾರ್ಥಕವೆನಿಸುತ್ತಿದೆ ಎಂದು ಟ್ವಿಟ್ ಮಾಡಿ ಮಹಿಳೆಯರನ್ನು ಅಭಿನಂದಿಸಿದ್ದಾರೆ.