ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ತಮ್ಮ ರಿಟೇನ್ ಆಟಗಾರರ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಆದರೆ ಈ ಬಾರಿ ಕೆಲ ತಂಡಗಳು ಸ್ಟಾರ್ ಆಟಗಾರರನ್ನು ರಿಟೇನ್ನಿಂದ ಕೈಬಿಟ್ಟು ಅಚ್ಚರಿ ಮೂಡಿಸಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಒಂದು.
ಆರ್ಸಿಬಿ ಈ ಬಾರಿ ಕೇವಲ ಮೂವರು ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಂಡಿದ್ದು ಉಳಿದ ಆಟಗಾರರನ್ನು ಹರಾಜಿಗಿಟ್ಟಿದೆ. ವಿರಾಟ್ ಕೊಹ್ಲಿ (21 ಕೋಟಿ ರೂ.), ರಜತ್ ಪಾಟಿದಾರ್ (11 ಕೋಟಿ ರೂ) ಮತ್ತು ಯಶ್ ದಯಾಳ್ (5 ಕೋಟಿ ರೂ) ಮಾತ್ರ ತಂಡದಲ್ಲಿ ಉಳಿದುಕೊಂಡಿದ್ದಾರೆ. ಇದರೊಂದಿಗೆ ಆರ್ಸಿಬಿ ಪರ್ಸ್ನಲ್ಲಿ ₹83 ಕೋಟಿ ಉಳಿಸಿಕೊಂಡಿದೆ. ಮತ್ತು ಮೂರು ರೈಟ್ ಟು ಮ್ಯಾಚ್ (RTM) ಕಾರ್ಡ್ಗಳನ್ನು ಹೊಂದಿದೆ.
ಇದನ್ನು ಓದಿ:ನಟ ಶಿವರಾಜ್ಕುಮಾರ್ಗೆ ಅನಾರೋಗ್ಯ: ಖುದ್ದು ಸ್ಪಷ್ಟನೆ ಕೊಟ್ಟ ಶಿವಣ್ಣ
ಆದರೆ 2021ರಿಂದ ತಂಡದಲ್ಲಿರುವ ಮ್ಯಾಕ್ಸ್ವೆಲ್ ಅವರನ್ನು ಬೆಂಗಳೂರು ತಂಡ ಉಳಿಸಿಕೊಳ್ಳದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಇದರ ನಡುವೆಯೇ ಇಎಸ್ಪಿಎನ್ ಕ್ರಿಕ್ಇನ್ಫೋ ಜೊತೆಗೆ ಮ್ಯಾಕ್ಸ್ವೆಲ್ಹೇಳಿಕೆಯೊಂದನ್ನು ನೀಡಿದ್ದಾರೆ. “ಈ ಬಾರಿ ಬಲಿಷ್ಠ ತಂಡ ಕಟ್ಟಲು ಆರ್ಸಿಬಿ ಸಂಕಲ್ಪ ತೊಟ್ಟಿದೆ. ವಿಶೇಷವಾಗಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ. ಆದರೆ ಆರ್ಸಿಬಿ ಜೊತೆಗಿನ ನನ್ನ ಪ್ರಯಾಣ ಇಲ್ಲಿಗೆ ಮುಗಿಯುವುದಿಲ್ಲ. ಮತ್ತೆ ತಂಡಕ್ಕೆ ಮರಳಲಿದ್ದೇನೆ” ಎಂದು ಹೇಳಿದ್ದಾರೆ.
ಮ್ಯಾಕ್ಸ್ವೆಲ್ ಆರ್ಸಿಬಿ ಪ್ರಮುಖ ಆಟಗಾರ. ಹಲವು ಪಂದ್ಯಗಳಲ್ಲಿ ಮಹತ್ವದ ಇನ್ನಿಂಗ್ಸ್ ಆಡಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಆದರೆ ಕಳೆದ ಋತುವಿನಲ್ಲಿ ತುಂಬಾ ನಿರಾಶಾದಾಯಕ ಪ್ರದರ್ಶನ ತೋರಿದ್ದರು. 9 ಇನ್ನಿಂಗ್ಸ್ಗಳಲ್ಲಿ ಕೇವಲ 52 ರನ್ ಗಳಿಸಿದ್ದರು. ಐಪಿಎಲ್ 2025 ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಜೆಡ್ಡಾದಲ್ಲಿ (ಸೌದಿ ಅರೇಬಿಯಾ) ನಡೆಯಲಿದೆ. ಹರಾಜಿನಲ್ಲಿ ಒಟ್ಟು 1,574 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 1,165 ಭಾರತೀಯರು ಮತ್ತು 409 ವಿದೇಶಿಗರು ಸೇರಿದ್ದಾರೆ.