ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಲು ಒತ್ತಾಯಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ. ಶನಿವಾರ ರಾಜಭವನಕ್ಕೆ ಬಂದ ರೈತ ಮುಖಂಡರನ್ನೊಳಗೊಂಡ ನಿಯೋಗ, ಮೈಸೂರಿನ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಾರದ ಹಗರಣವಾಗಿದ್ದು ಪ್ರಭಾವಿ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರು ಭಾಗಿಯಾಗಿರುವ ಕಾರಣ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು , ಶಿಕ್ಷಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದರು. ಈ ವೇಳೆ ಹತ್ತು ನಿಮಿಷಗಳ ಕಾಲ ವಿವರವಾಗಿ ಎಲ್ಲಾ ಮಾಹಿತಿಯನ್ನು ನಿಯೋಗದಿಂದ ರಾಜ್ಯಪಾಲರು ಪಡೆದುಕೊಂಡರು.
ಒಂದು ವರ್ಷ ಹಿಂದೆ ಮುಡಾ ಕಚೇರಿಯಲ್ಲಿನ ದಾಖಲಾತಿಗಳು ಹಾಗೂ ಕಡತಗಳು ಕಳುವು ಆಗಿದ್ದು ಈ ಬಗ್ಗೆ ರೈತ ಸಂಘಟನೆಯಿಂದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಅವತ್ತಿನ ದಿನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಸರ್ಕಾರದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಪ್ರಭಾವಿಗಳಿಂದ ಲಪಟಾಯಿಸುವುದು ತಪ್ಪುತಿತ್ತು.