‘ರಂಗಿತರಂಗ’, ‘ವಿಂಡೋ ಸೀಟ್’, ‘ರಾಜರಥ’ ಅಂಥಹಾ ಸಿನಿಮಾಗಳಲ್ಲಿ ಚಾಕೋಲೆಟ್ ಬಾಯ್, ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದ ಸ್ಪುರದ್ರೂಪಿ ನಟ ನಿರೂಪ್ ಭಂಡಾರಿ, ಈಗ ಲಾಂಗ್ ಹಿಡಿದು ಮಾಸ್ ಅವತಾರ ತಾಳಿದ್ದಾರೆ. ಕೈಗೆ ಕೋಳ, ರಕ್ತದಲ್ಲಿ ಅದ್ದಿದ ಮುಖ, ಕಣ್ಣಿಗೊಂದು ಕೂಲಿಂಗ್ ಗ್ಲಾಸು, ಕುರುಚಲು ಗಡ್ಡ ಇದು ನಿರೂಪ್ ಭಂಡಾರಿಯ ಹೊಸ ಸಿನಿಮಾದ ಲುಕ್. ‘ಅತಿಕಾಯ’ ಹೆಸರಿನ ಹೊಸ ಸಿನಿಮಾಕ್ಕಾಗಿ ಹೀಗೆ ಮಾಸ್ ಅವತಾರ ತಾಳಿದ್ದಾರೆ ನಿರೂಪ್.
ನಾಗರಾಜ್ ಪೀಣ್ಯ, ನಿರೂಪ್ ಭಂಡಾರಿ ಕೈಗೆ ಮಚ್ಚು ನೀಡಿರುವ ನಿರ್ದೇಶ, ‘ಪದೇ ಪದೇ’, ‘ನಮಕ್ಹರಾಮ್’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಅನುಭವವಿರುವ ನಾಗರಾಜ್ ಪೀಣ್ಯ ಕೆಲ ಕಾಲ ಚಿತ್ರರಂಗದಿಂದ ಮರೆಯಾಗಿದ್ದರು, ಈಗ ‘ಅತಿಕಾಯ’ ಸಿನಿಮಾ ಮೂಲಕ ನಿರ್ದೇಶಕನ ಕುರ್ಚಿಗೆ ಮರಳಿದ್ದಾರೆ. ತಮ್ಮ ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಕತೆಯೊಂದಿಗೆ ಮರಳಿದ್ದಾರೆ ನಾಗರಾಜ್.
ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಕೆಲ ಹಂತದ ಚಿತ್ರೀಕರಣವನ್ನು ಮುಗಿಸಲಾಗಿದೆ. ಈವರೆಗಿನ ಚಿತ್ರೀಕರಣವನ್ನು ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ಮಾಡಿದ್ದಾರೆ ನಿರ್ದೇಶಕ. ಸಿನಿಮಾಕ್ಕೆ ನೈಜತೆ ಪ್ರಾಪ್ತವಾಗಲೆಂಬ ಕಾರಣಕ್ಕೆ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಸಹಜವಾಗಿಯೇ ಸಿನಿಮಾದ ಚಿತ್ರೀಕರಣವನ್ನು ಚಿತ್ರತಂಡ ಮಾಡಿದೆ.
ಸಿನಿಮಾದ ಬಗ್ಗೆ ಮಾತನಾಡಿರುವ ನಾಗರಾಜ್ ಪೀಣ್ಯ, ‘ಈ ಸಿನಿಮಾದಲ್ಲಿ ಭಿನ್ನ ನಿರೂಪ್ ಭಂಡಾರಿಯನ್ನು ಪ್ರೇಕ್ಷಕರು ನೋಡಲಿದ್ದಾರೆ. ಅವರ ಈ ಹಿಂದಿನ ಸಿನಿಮಾ ಹಾಗೂ ಪಾತ್ರಗಳಿಗಿಂತಲೂ ಬಹಳ ಭಿನ್ನವಾಗಿ ಈ ಸಿನಿಮಾ ಇರಲಿದೆ. ಪಾತ್ರಕ್ಕಾಗಿ ನಿರೂಪ್ ಭಂಡಾರಿ ಸಾಕಷ್ಟು ಶ್ರಮ ಹಾಕಿದ್ದಾರೆ. ಜಿಮ್ನಲ್ಲಿ ಸತತವಾಗಿ ಬೆವರಿಳಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಸಂಭಾಷಣಾ ಶೈಲಿ ಸಹ ಭಿನ್ನವಾಗಿರಲಿದೆ. ‘ಅತಿಕಾಯ’ ಸಿನಿಮಾ ಸಹ ಬಹಳ ರಗಡ್ ಆಗಿರಲಿದೆ’ ಎಂದದ್ದಾರೆ. ಸಿನಿಮಾದ ಕ್ಯಾಮೆರಾ ಕೆಲಸವನ್ನು ಉದಯಲೀಲ ಮಾಡುತ್ತಿದ್ದಾರೆ. ಶ್ರೀನಿವಾಸ್ ಪಿ ಬಾಬು ಎಡಿಟ್ ಮಾಡಲಿದ್ದು, ಸತೀಶ್ ಆರ್ಯನ್ ಸಂಗೀತ ನೀಡುತ್ತಿದ್ದಾರೆ.