ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಭರ್ತಿಯಾಗುವ ಹಂತ ತಲುಪಿದ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಜಲಾಶಯದ ಇಂದಿನ ಮಟ್ಟ 1814 ಅಡಿಯಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 6 ಅಡಿ ಮಾತ್ರ ಬಾಕಿಯಿದೆ. ಜಲಾಶಯದ ಒಳ ಹರಿವು 53061 ಕ್ಯೂಸೆಕ್, ಹೊರ ಹರಿವು 10000 ಕ್ಯೂಸೆಕ್ ಆಗಿದೆ. ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಹಾಗೂ ಜಲಾಶಯದ ಅಧಿಕಾರಿಗಳು ಸೂಚನೆ ರವಾನಿಸಿದ್ದಾರೆ.
ಕಬಿನಿ-ಕೆಆರ್ಎಸ್ನಿಂದಲೂ ನೀರು ಬಿಡುಗಡೆ
ಕಬಿನಿ ಮತ್ತು ಕೆಆರ್ಎಸ್ನಿಂದ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕೊಳ್ಳೇಗಾಲ ತಾಲೂಕಿನಲ್ಲಿ 9 ಗ್ರಾಮಗಳಿಗೆ ಜಲ ದಿಗ್ಭಂಧನ ಎದುರಾಗಿದೆ.
ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ
ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಲಾಗಿದೆ. ಮಲಪ್ರಭಾ ನದಿ ಪ್ರವಾಹಕ್ಕೆ ಬೆಳೆಗಳು ಜಲಾವೃತಗೊಂಡಿವೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಲಖಮಾಪೂರ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ. ಕಬ್ಬು, ಗೋವಿನಜೋಳ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ ಜಲಾವೃತ
ಕೊಪ್ಪಳದ ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಲಿದೆ. ಹುಲಗಿ ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ ಜಲಾವೃತಗೊಂಡಿದೆ. ಕೇಶಮುಂಡನ ಮಾಡುವ ಕೋಣೆ ಕೂಡಾ ಜಲಾವೃತಗೊಂಡಿದ್ದು, ನೀರಿನ ಪ್ರಮಾಣ ಹೆಚ್ಚಾದ್ರೆ ಅನೇಕ ಅಂಗಡಿಗಳು ಜಲಾವೃತ ಸಾಧ್ಯತೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಸಮೀಪ ಭಕ್ತರನ್ನು ಬಿಡಲಾಗುತ್ತಿಲ್ಲ.