ಸುಕುಮಾರ್ ನಿರ್ದೇಶನದ ಹಾಗೂ ಬಹುನಿರೀಕ್ಷಿತ ಪುಷ್ಪಾ 2 ಚಿತ್ರ ಇದೀಗ ಬಿಡುಗಡೆಯಾಗಿದ್ದು ಎಲ್ಲೆಡೆ ಅಭೂತಪೂರ್ವ ಯಶಸ್ಸು ಕಾಣುತ್ತಿದೆ ಎಂದರೆ ತಪ್ಪಾಗದು. ಚಿತ್ರ ತನ್ನ ಮೊದಲ ದಿನವೇ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. ಈ ಚಿತ್ರ ನಿಜಕ್ಕೂ ಅದ್ಭುತ ಬಿಡುಗಡೆ ಕಂಡಿದ್ದು ಮುಂಬರುವ ದಿನಗಳಲ್ಲಿ ಅತ್ಯದ್ಭುತ ಯಶಸ್ಸು ನೋಡಲಿದೆ ಎಂಬ ಲೆಕ್ಕಾಚಾರಗಳು ಈಗಾಗಲೇ ಮಾಡಲಾಗುತ್ತಿದೆ. ಅಲ್ಲು ಅರ್ಜುನ್ ಅವರ ಅಭಿನಯಕ್ಕಂತೂ ಈ ಚಿತ್ರದಲ್ಲಿ ನೂರಕ್ಕೆ ನೂರರಷ್ಟು ಮಾರ್ಕ್ಸ್ ನೀಡಲಾಗಿದ್ದು ಈಗ ಅಲ್ಲು ಅರ್ಜುನ್ ವಾಸ್ತವದಲ್ಲಿ ಭಾರತದಾದ್ಯಂತ ಅದ್ಭುತ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ನಡುವೆ ಕರ್ನಾಟಕದಲ್ಲಿಯೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಕನ್ನಡಕ್ಕೆ ಡಬ್ ಆದರೂ, ತೆಲುಗು ಅವತರಣಿಕೆಯೇ ಕರ್ನಾಟಕದಾದ್ಯಂತ ರಿಲೀಸ್ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿ ಇನ್ನೂ ಹಲವು ಸ್ಟಾರ್ ನಟರು ನಟಿಸಿರುವ ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ.
ಒಂದೆಡೆ ಪುಷ್ಪ 2 ತನ್ನ ಅದ್ಭುತ ಓಟವನ್ನು ಗಲ್ಲಾಪೆಟ್ಟಿಗೆಯಲ್ಲಿ ಮುಂದುವರೆಸುತ್ತಿದ್ದರೆ ಇನ್ನೊಂದೆಡೆ ಈ ಚಿತ್ರದಲ್ಲಿದೆ ಎನ್ನಲಾದ ಕೆಲ ಡೈಲಾಗ್ ಗಳು ಸಹ ಸಾಕಷ್ಟು ವಿವಾದದ ಅಲೆ ಸೃಷ್ಟಿಸುತ್ತಿವೆ ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ ಬಾಸ್ ಯಾರು ಎಂಬುದರ ಬಗ್ಗೆ ಈ ಚಿತ್ರದಲ್ಲಿ ಹೇಳಲಾದ ಕೆಲ ಡೈಲಾಗ್ ಗಳು ತೆಲುಗು ಚಿತ್ರದ ಮೆಗಾಸ್ಟಾರ್ ಅವರನ್ನು ಕಿಚಾಯಿಸಿದಂತಿದೆ ಎಂಬೆಲ್ಲ ಮಾತುಗಳು ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ಅಷ್ಟಕ್ಕೂ, ಚಿತ್ರದ ನಿರ್ಮಾಣಕಾರರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ಕೆಲ ದುಷ್ಕರ್ಮಿಗಳು ಬೇಕಂತಲೆಯೇ ಈ ರೀತಿಯ ವಿವಾದ ಸೃಷ್ಟಿಸುತ್ತಿದ್ದು ಚಿತ್ರದಲ್ಲಿ ಅಂತಹ ಯಾವುದೇ ಡೈಲಾಗ್ ಗಳಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅವರು ಅಂತಹವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮೈತ್ರಿ ಮೂವೀಸ್ ಅವರು ತಮ್ಮ ಅಧಿಕೃತ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ತಮ್ಮದೇ ಕ್ರಿಯೇಟಿವಿಟಿಯಿಂದ ರಚಿಸಿರುವ ಕೆಲವು ಕಾಲ್ಪನಿಕ ಸಂಭಾಷಣೆಗಳು ಪುಷ್ಪ-2 ಸಿನಿಮಾದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರಕ್ಕಾಗಿ ಇಂತಹ ಪೋಸ್ಟ್ ಮಾಡುತ್ತಿದ್ದಾರೆ. ಅವರು ಇದನ್ನು ನಿಲ್ಲಿಸದಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಮೊದಲಾರ್ಧದ ಪ್ರತಿ ಫ್ರೇಮ್ ನಲ್ಲೂ ಪುಷ್ಪ ಕಾಣಿಸುತ್ತ ಹೋಗುತ್ತಾನೆ. ವಿಶಿಷ್ಟ ಮ್ಯಾನರಿಸಂ, ಡೈಲಾಗ್ ಡೆಲಿವರಿ ಮೂಲಕ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತ ಹೋಗುತ್ತಾನೆ. ಹಣವೊಂದಿದ್ದರೆ ಕೇಂದ್ರ ಸಚಿವನನ್ನೇ ಈ ಪುಷ್ಪ ಖರೀದಿಸುತ್ತಾನೆ. ತನಗನಿಸಿದವನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವ ತಾಕತ್ತು ಪುಷ್ಪನಿಗಿದೆ. ಅಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದಾನೆ. ಹೀಗೆ ಕಥೆ ಕೂಡುತ್ತಾ ಹೋಗುತ್ತದೆ.