ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟಿಸಲಿದೆ. ಮುಂದಿನ ಭಾನುವಾರದವರೆಗೂ ರಾಜ್ಯದ ಹಲವೆಡೆ ಭಾರೀ ಮಳೆ ಆಗಲಿದೆ. ಮಲೆನಾಡು, ಹಳೆ ಮೈಸೂರು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ?
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಉತ್ತಮ ಮಳೆ ಆಗಲಿದೆ. ಉತ್ತರ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳಲ್ಲಿ ಸಾಧಾರಣದಿಂದ ಹಗುರ ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಇದೇ ಪರಿಸ್ಥಿತಿ ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನು ಓದಿ:‘ಭೈರತಿ ರಣಗಲ್’ಗೆ ಸ್ಯಾಂಡಲ್ ವುಡ್ ಸಾಥ್.. ಮುಂಜಾನೆ 6ರಿಂದಲೇ ಶೋಗಳು ಬಿಗಿನ್..!
ಮಳೆ ಜೊತೆಯಲ್ಲೇ ಚಳಿಯೂ ಹೆಚ್ಚು!
ಮಳೆಯಿಂದಾಗಿ ಸಹಜವಾಗಿಯೇ ರಾಜ್ಯದ ಹಲವೆಡೆ ಉಷ್ಣಾಂಶದಲ್ಲಿ ಭಾರೀ ಕುಸಿತ ಕಂಡು ಬರಲಿದ್ದು, ಚಳಿಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಲಿದೆ. ಅದರಲ್ಲೂ ಬೆಳಗಿನ ವೇಳೆ ಅಧಿಕ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ನೀಡಿರುವ ವರದಿ ಹೇಳಿದೆ.
ಯಾವ ದಿನ ಯಾವ ಜಿಲ್ಲೆಯಲ್ಲಿ ಮಳೆ?
ಕಾವೇರಿ ಜಲಾನಯನ ಪ್ರದೇಶದಲ್ಲಿ ನವೆಂಬರ್ 17 ರವರೆಗೆ ಚದುರಿದಂತೆ ವ್ಯಾಪಕವಾಗಿ ಹಾಗೂ ಸಾಧಾರಣವಾಗಿ ಮಳೆ ಆಗಬಹುದು. ಕೆಲವೆಡೆ ಭಾರಿ ಮಳೆ ಕೂಡಾ ಆಗಬಹುದು. ಇನ್ನುಳಿದ ದಿನಗಳಲ್ಲಿ ಈ ಭಾಗದಲ್ಲಿ ಒಣ ಹವೆ ಇರುತ್ತದೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನವೆಂಬರ್ 16 ರವರೆಗೆ ವ್ಯಾಪಕವಾಗಿ ಹಾಗೂ ಅಲ್ಲಲ್ಲಿ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ. ಇನ್ನುಳಿದ ದಿನಗಳಲ್ಲಿ ಎಂದಿನಂತೆ ಒಣ ಹವೆ ಮುಂದುವರೆಯಲಿದೆ.
ಕುಸಿಯಲಿದೆ ಉಷ್ಣಾಂಶ! ಚಳಿಯ ಆರ್ಭಟ
ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಯಲ್ಲಿ ಈಗಾಗಲೇ ಉಷ್ಣಾಂಶ ಕುಸಿದಿದ್ದು, ಇದೇ ಸನ್ನಿವೇಶ ಇನ್ನಷ್ಟು ದಿನ ಮುಂದುವರೆಯಲಿದೆ. ಚಳಿ ಇನ್ನಷ್ಟು ಹೆಚ್ಚಾಗಲಿದೆ. ಅದರಲ್ಲೂ ಬೆಳಗಿನ ವೇಳೆ ಚಳಿ ಅಧಿಕವಾಗಲಿದೆ. ಉತ್ತರ ಕರ್ನಾಟಕ ಭಾಗದ ವಿಜಯಪುರ, ಬೀದರ್, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳ ಭಾಗದಲ್ಲಿ ಚಳಿ ಮುಂದುವರೆಯಲಿದೆ.
ಇದನ್ನು ಓದಿ:ಟಿಪ್ಪು ಸುಲ್ತಾನ್ ಅಂತಿಮ ಖಡ್ಗ 3.4 ಕೋಟಿಗೆ ಹರಾಜು : ಆತನಿಗೂ ಬೆನ್ನು ಹತ್ತಿತಾ ಬ್ಯಾಡ್ಲಕ್..?
ಇತ್ತ ದಕ್ಷಿಣ ಕರ್ನಾಟಕ ಭಾಗದ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ಮೈಸೂರು ಭಾಗದಲ್ಲೂ ಉಷ್ಣಾಂಶ ಕುಸಿಯಲಿದ್ದು, ಚಳಿಯ ದಟ್ಟ ಅನುಭವ ಬೆಳಗಿನ ವೇಳೆ ಆಗಲಿದೆ.