ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಪ್ಲೇಯರ್ಸ್ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ತಂಡದ ಎಲ್ಲ ಆಟಗಾರರು ಚೆನ್ನೈಯನ್ನು ತಲುಪಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಸೆ.19ರಿಂದ ಆರಂಭವಾಗಲಿದ್ದು ಈ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆಯ ಹೊಸ್ತಿನಲ್ಲಿದ್ದಾರೆ.
ಕಿಂಗ್ ಕೊಹ್ಲಿ ಒಂದು ರನ್ ಗಳಿಸಿದರು ಯಾವುದಾದರೂ ಒಂದು ರೆಕಾರ್ಡ್ ಆಗುತ್ತಲಿರುತ್ತದೆ. ಬಾಂಗ್ಲಾದೇಶದ ವಿರುದ್ಧ ನಡೆಯುವ ಟೆಸ್ಟ್ ಪಂದ್ಯದಲ್ಲಿ ಕೂಡ ಕೊಹ್ಲಿ ಅವರ ವರ್ಲ್ಡ್ ರೆಕಾರ್ಡ್ ಆಗಲಿದೆ. ಅದಕ್ಕೆ ಬೇಕಾಗಿರುವುದು ಕೇವಲ 58 ರನ್ಗಳು ಮಾತ್ರ. ವಿರಾಟ್ ಕೊಹ್ಲಿಯವರು ತಾವು ಆಡಿದ ಎಲ್ಲ ಇನ್ನಿಂಗ್ಸ್ಗಳಲ್ಲಿ ಅಂದರೆ ಟೆಸ್ಟ್, ಏಕದಿನ, ಟ್ವಿ20 ಎಲ್ಲ ಮಾದರಿಯ 591 ಇನ್ನಿಂಗ್ಸ್ಗಳಲ್ಲಿ 26,942 ರನ್ ಗಳಿಸಿದ್ದಾರೆ. 27,000 ರನ್ಗಳಿಗೆ ಇನ್ನು ಬೇಕಿರುವುದು ಕೇವಲ 58 ರನ್ ಮಾತ್ರ. ಈ 58 ರನ್ಗಳನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದೆ ಆದರೆ ಒಟ್ಟು 27 ಸಾವಿರ ರನ್ಗಳನ್ನು ಗಳಿಸಿ ವಿಶ್ವ ದಾಖಲೆ ಮಾಡಲಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಈ ದಾಖಲೆ ಇದೆ. ಸಚಿನ್ ಟೆಸ್ಟ್, ಏಕದಿನ ಹಾಗೂ ಟಿ20ಯ 623 ಇನ್ನಿಂಗ್ಸ್ನಲ್ಲಿ 27 ಸಾವಿರ ರನ್ ಗಳಿಸಿದ್ದಾರೆ. ಈ ರೆಕಾರ್ಡ್ ಅನ್ನು ಕಡಿಮೆ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಬ್ರೇಕ್ ಮಾಡಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟ್ಸ್ಮನ್ ಎಂಬ ಖ್ಯಾತಿಯನ್ನು ವಿರಾಟ್ ಕೊಹ್ಲಿ ಪಡೆಯಲಿದ್ದಾರೆ. ಸಚಿನ್ ತೆಂಡೂಲ್ಕರ್ ಒಟ್ಟು 34,357 ರನ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕುಮಾರ ಸಂಗಾಕ್ಕರ 28,016 ರನ್ನಿಂದ 2ನೇ ಸ್ಥಾನದಲ್ಲಿದ್ದಾರೆ. ಆಸಿಸ್ನ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ 27,483 ರನ್ನಿಂದ 3ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ 27,000 ರನ್ಗಳನ್ನು ಗಳಿಸಿದರೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.