ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಎ1 ಆರೋಪಿಯನ್ನಾಗಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ಮುಕ್ತಾಯ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಆರೋಪಿಗಳ ವಿವರವನ್ನು ಉಲ್ಲೇಖಿಸುವಾಗ ದರ್ಶನ್ ಅವರನ್ನು ಎ1 ಎಂದು ಪೊಲೀಸರು ಉಲ್ಲೇಖಿಸಲಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಬಂಧನದ ಬಳಿಕ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಅವರನ್ನು ಎ1 ಎಂದು, ದರ್ಶನ್ ಅವರನ್ನು ಎ2 ಆರೋಪಿ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ ತನಿಖೆ ವೇಳೆ ಇಡೀ ಕೃತ್ಯದ ಸೂತ್ರಧಾರ ದರ್ಶನ್ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಎ1 ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಪ್ರದೂಷ್ ಮೊಬೈಲ್ನಲ್ಲಿ ಪತ್ತೆಯಾದ ಫೋಟೋ: ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ರಕ್ತಸಿಕ್ತವಾಗಿ ಬಿದ್ದಿರುವ ಭಾವಚಿತ್ರಗಳು ದರ್ಶನ್ ಸ್ನೇಹಿತ ಪ್ರದೂಷ್ ಮೊಬೈಲ್ನಲ್ಲಿ ಪತ್ತೆಯಾಗಿವೆ. ಹತ್ಯೆ ಕೃತ್ಯದ ಬಳಿಕ ಮೊಬೈಲ್ನಲ್ಲಿದ್ದ ಫೋಟೋಗಳನ್ನು ಪ್ರದೂಷ್ ಡಿಲೀಟ್ ಮಾಡಿದ್ದ. ಆದರೆ ಆತನ ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿಯ ರಕ್ತಸಿಕ್ತ ಮೂರು ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ದರ್ಶನ್ ಎ-1 ಆಗಲು ಕಾರಣವೇನು?
ದರ್ಶನ್, ರಾಘವೇಂದ್ರಗೆ ಕರೆ ಮಾಡಿ ರೇಣುಕಾಸ್ವಾಮಿ ಪತ್ತೆ ಹಚ್ಚಲು ಸುಪಾರಿ ಕೊಟ್ಟಿದ್ದರು. ರೇಣುಕಸ್ವಾಮಿ ಪತ್ತೆ ಬಳಿಕ ಕಿಡ್ನ್ಯಾಪ್ಗೆ ಸೂಚನೆ ನೀಡಿದ್ದರು. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ, ಹತ್ಯೆ ಹಾಗೂ ಶವ ವಿಲೇವಾರಿಗೆ ಹಣ ಕೊಟ್ಟಿದ್ದು, ಸಿಸಿಟಿವಿ ದೃಶ್ಯಗಳ ಡಿಲೀಟ್ ಮಾಡಿದ್ದು ಸೇರಿದಂತೆ ಇನ್ನೂ ಅನೇಕ ಆರೋಪಗಳು ದರ್ಶನ್ರನ್ನು ಎ1 ಆರೋಪಿ ಎಂದು ಉಲ್ಲೇಖಿಸಲು ಕಾರಣವಾಗಿದೆ.