ಕನ್ನಡ ನಟ ರಿಷಬ್ ಶೆಟ್ಟಿ ಅವರು ಆಗಸ್ಟ್ 6ರಂದು ಬೆಂಗಳೂರಿನಲ್ಲಿ ತಮಿಳು ನಟ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾದರು. ಕೆಲವು ಕ್ಯಾಂಡಿಡ್ ಚಿತ್ರಗಳನ್ನು ಹಂಚಿಕೊಂಡ ರಿಷಬ್, ನಟನಾಗಿ ತನ್ನ ಪ್ರಯಾಣದಲ್ಲಿ ತನಗೆ ಸ್ಫೂರ್ತಿ ನೀಡಿದ ವಿಕ್ರಮ್ ಅವರನ್ನು ಭೇಟಿಯಾಗಲು 24 ವರ್ಷಗಳೇ ಬೇಕಾಯ್ತು ಎಂದು ಬರೆದುಕೊಂಡಿದ್ದಾರೆ. ಚಿಯಾನ್ ವಿಕ್ರಮ್ ಅವರು ಪಾ ರಂಜಿತ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ ‘ತಂಗಾಲನ್’ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆಗ ರಿಷಬ್ ಅವರನ್ನು ನಟ ಭೇಟಿಯಾಗಿದ್ದಾರೆ.
ಆಗಸ್ಟ್ 6 ರಿಷಬ್ ಶೆಟ್ಟಿ ಜೀವನದಲ್ಲಿ ಮರೆಯಲಾಗದ ದಿನವಾಗಿದೆ. ಎಕ್ಸ್ ಪೇಜ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ರಿಷಬ್, “ನಟನಾಗುವಾಗ ನನ್ನ ಪ್ರಯಾಣದಲ್ಲಿ, ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿಯಾಗಿದ್ದರು. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಇಂದು ವಿಕ್ರಮ್ ಅವರನ್ನು ಭೇಟಿಯಾದೆ. ಹೀಗಾಗಿ ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು, ತಂಗಲಾನ್ ಸಿನಿಮಾಗೆ ಶುಭ ಹಾರೈಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ.
‘ತಂಗಾಲನ್’ ಬಿಡುಗಡೆಗೆ ಮುನ್ನ, ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಈ ಹಿಂದೆ, ತಯಾರಕರು ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದರು. ಬೆಂಗಳೂರು ಈವೆಂಟ್ ಆಗಸ್ಟ್ 6 ರಂದು ನಡೆದಿದ್ದು, ತಂಡ ಈಗ ಮುಂಬೈ ಮತ್ತು ಕೊಚ್ಚಿಗೆ ತೆರಳಲಿದೆ. ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ’ ಪ್ರೀಕ್ವೆಲ್ನ ಚಿತ್ರೀಕರಣದಲ್ಲಿದ್ದಾರೆ, ಇದು ಡಿಸೆಂಬರ್ 2024 ರಲ್ಲಿ ಬಿಡುಗಡೆಯಾಗಲಿದೆ. ಚಿಯಾನ್ ವಿಕ್ರಮ್ ‘ತಂಗಲಾನ್’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಆಗಸ್ಟ್ 15 ರಂದು ಬಹು ಭಾಷೆಗಳಲ್ಲಿ ಥಿಯೇಟರ್ಗಳಲ್ಲಿ ಬರಲಿದೆ.