ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ಬಾಕಿ ಇರುವ ಮಾನನಷ್ಟ ಪ್ರಕರಣದಲ್ಲಿ ಹೊಸದಾಗಿ ಮತ್ತು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಆರ್ಎಸ್ಎಸ್ ಕಾರ್ಯಕರ್ತನಿಗೆ ಅನುಮತಿ ನೀಡಿದ್ದ ಭಿವಂಡಿ ಮ್ಯಾಜಿಸ್ಟ್ರೇಟ್ ಕೋರ್ಟ್ನ ಆದೇಶವನ್ನು ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ. ರಾಹುಲ್ ಗಾಂಧಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರಿದ್ದ ಏಕಸದಸ್ಯ ಪೀಠವು ರಾಹುಲ್ ಗಾಂಧಿಯವರ ಅರ್ಜಿಯನ್ನು ಅಂಗೀಕರಿಸಿತು.
ಈ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸೂಚಿಸಿದ ಪೀಠವು, ಇದಕ್ಕೆ ಎರಡೂ ಕಡೆಯವರು ಸಹಕರಿಸಬೇಕು ಎಂದೂ ಹೇಳಿತು. ಮಹಾತ್ಮ ಗಾಂಧಿಯವರ ಹತ್ಯೆಗೆ ಬಲಪಂಥೀಯ ಸಂಘಟನೆಯೇ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ, ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು 2014ರಲ್ಲಿ ಭೀವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.