ವರನಟಿ ಲೀಲಾವತಿ ಅವರು ನಮ್ಮನ್ನಗಲಿ ಒಂದು ವರ್ಷವಾಗಿದೆ. ಇನ್ನು ಎರಡು ದಿನಗಳು ಕಳೆದರೆ ಒಂದು ವರ್ಷದ ಕಾರ್ಯ ಕೂಡ ಮಾಡಬೇಕಿದೆ. ಅದಕ್ಕೂ ಮುನ್ನವೇ ಅಂದುಕೊಂಡಂತೆ ಪುತ್ರ ವಿನೋದ್ ರಾಜ್ ತಾಯಿಯ ಸ್ಮಾರಕವನ್ನು ಮಾಡಿ ಮುಗಿಸಿದ್ದಾರೆ. ತಾಯಿಗಾಗಿ ಅದ್ಭುತವಾದ ಮಂದಿರ ಕಟ್ಟಿಸಿದ್ದಾರೆ.
ಸೋಲದೇವನಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಮಾತ್ರ ದೇಗುಲವದು. ಅಷ್ಟು ಅದ್ಭುತವಾಗಿದೆ. ಬಂಗಾರದ ಬರಹಗಳ ಮೂಲಕ ವರನಟಿ ಅವರ ಸ್ಮಾರಕ ಅಭಿಮಾನಿಗಳನ್ನು ಸ್ವಾಗತಿಸುತ್ತೆ. ಮಂದಿರದ ಸುತ್ತಲೂ ದೀಪಾಲಂಕಾರ ಮಾಡಲಾಗಿದೆ. ಲೀಲಾವತಿ ಅಮ್ಮನವರು ಮಾಡಿದ ಸಿನಿಮಾಗಳ ಪ್ರಮುಖ ಫೋಟೋಗಳನ್ನು ಸ್ಮಾರಕದ ಗೋಡೆಗಳಿಗೆ ಹಾಕಲಾಗಿದೆ. ಸುಮಾರು 63ಕ್ಕೂ ಹೆಚ್ಚು ಫೋಟೋಗಳು ನೋಡಗರನ್ನು ಬೆರಗುಗೊಳಿಸುತ್ತೆ. ಲೀಲಾವತಿ ಅಮ್ಮನವರ ಸ್ಮಾರಕವೂ ಕೂಡ ವಿಶೇಷವಾದ ಮಾರ್ಬಲ್ಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಮಂಟಪಗಳನ್ನು ನಿಲ್ಲಿಸಲಾಗಿದೆ.
ಲೀಲಾವತಿ ಅಮ್ಮನವರ ಸ್ಮಾರಕದ ಉದ್ಘಾಟನೆಗೆ ರಾಜಕಾರಣಿಗಳು ಸೇರಿದಂತೆ ಸಿನಿಮಾ ರಂಗದ ಹಲವು ಹಿರಿಯ ನಟರು ಆಗಮಿಸಿದ್ದರು. ಆಹಾರ ಸಚಿವ ಹೆಚ್. ಮುನಿಯಪ್ಪ, ಒಕ್ಕಲಿಗ ಮಠದ ನಿರ್ಮಲಾನಂದ ಶ್ರೀಗಳು ಕೂಡ ಸ್ಮಾರಕಕ್ಕೆ ಭೇಟಿ ಕೊಟ್ಟು ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಗಿರಿಜಾ ಲೋಕೇಶ್ ಅವರು ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಸರಳ ಜೀವನದ ಬಗ್ಗೆ ಹಾಡಿ ಹೊಗಳಿದರು.
ಇನ್ನು ಸ್ಮಾರಕ ಉದ್ಘಾಟನೆ ವೇಳೆ ಬಂದ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಲೀಲಾವತಿಯವರ ಸ್ಮಾರಕ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು.ಇನ್ನು ಚಲನಚಿತ್ರ ಲೋಕದಲ್ಲಿ ನಕ್ಷತ್ರದಂತೆ ಮಿನುಗಿದ ವರನಟಿ ಲೀಲಾವತಿ ಅವರ ಪುತ್ರ, ನಟ ವಿನೋದ್ರಾಜ್ ಅವರು ಅಮ್ಮನಿಗಾಗಿ ದೇಗುಲ ನಿರ್ಮಾಣ ಮಾಡಿದ್ದು, ಡಿ.5ರಂದು ಲೋಕಾರ್ಪಣೆಗೊಂಡಿದೆ. ತಾಯಿ-ಮಗನ ಬಾಂಧವ್ಯಕ್ಕೆ ಈ ಭವ್ಯ ದೇಗುಲ ಸಾಕ್ಷಿಯಾಗಿದೆ.
ನಟನೆಯಲ್ಲಿ ಅಲ್ಲದೆ ನಿಜ ಜೀವನದಲ್ಲಿಯೂ ಕೂಡ ಮಗನ ಪಾಲಿಗೆ, ಕಲಾವಿದರು, ಮನೆ, ತೋಟದಲ್ಲಿ ಕೆಲಸ ಮಾಡುವವರು,ಪ್ರಾಣಿಪಕ್ಷಿಗಳಿಗೆ, ಸೋಲದೇವನಹಳ್ಳಿ ಭಾಗದ ಜನರ ಪಾಲಿಗೆ ಮಾತೃ ಹೃದಯಿ ಲೀಲಮ್ಮ ಅವರ ತಾಯಿಗುಣ ಮರೆಯುವಂತಿಲ್ಲ. ಲೀಲಾವತಿ ಅವರ ದೇಗುಲ ಮುಂದಿನ ಪೀಳಿಗೆಯಲ್ಲಿ ತಾಯಿಯ ಮಮತೆ ಹೆಚ್ಚಿಸಲಿದೆ.