ಬಿಗ್ಬಾಸ್ ಸೀಸನ್ 11 ಶುರುವಾಗಿ ಒಂದು ತಿಂಗಳು ಸಮೀಪಿಸುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಗಲಾಟೆಯ ಕಾವು ಇಡೀ ಮನೆಯನ್ನು ಆವರಿಸಿದೆ. ವಾದ-ಪ್ರತಿವಾದಗಳು ಜೋರಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ದೊಡ್ಡನೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆಯಿತು.
ಈ ಬಗ್ಗೆ ನಿರೂಪಕ ಸುದೀಪ್ ಬೇಸರ ಹೊರಹಾಕಿ ಸ್ಪರ್ಧಿಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡರು. ಆದರೆ, ಪ್ರತಿವಾರದ ಕೊನೆಯಲ್ಲಿ ಮೇಷ್ಮಂತೆ ತಮ್ಮ ಮುಂದೆ ಬಂದು ಸರಿ-ತಪ್ಪುಗಳನ್ನು ತಿದ್ದಿ ಹೇಳುವ ಸುದೀಪ್ ವಿರುದ್ಧವೇ ಸ್ಪರ್ಧಿಗಳು ಅಸಮಾಧಾನ ಹೊರಹಾಕಿದ್ದಾರೆ. ಬಿಗ್ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥಾ ಘಟನೆಗೆ ಬಿಗ್ಬಾಸ್ ಸೀಸನ್ 11 ಸಾಕ್ಷಿಯಾಗಿದೆ. ಅಷ್ಟಕ್ಕೂ ನಡೆದಿದ್ದೇನು. ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ಸ್ಪರ್ಧಿ ಜಗದೀಶ್ ವಿರುದ್ಧ ಇಡೀ ಮನೆಯವರು ತಿರುಗಿಬಿದ್ದಿದ್ದರು. ಜಗದೀಶ್ ಕೂಡ ತಮ್ಮ ಕಟುವಾದ ಮಾತುಗಳಿಂದ ಮನೆಯಲ್ಲಿ ಅಲ್ಲೋಲ ಸೃಷ್ಟಿಸಿದರು. ಅದರಲ್ಲೂ ಜಗದೀಶ್ ಅವರು ಮಹಿಳಾ ಸ್ಪರ್ಧಿಗಳ ಬಗ್ಗೆ ನಿಂದನೀಯವಾಗಿ ಮಾತನಾಡಿದರು. ಮಹಿಳೆಯುರ ಕೂಡ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಜಗದೀಶ್ಗೆ ಟಕ್ಕರ್ ಕೊಟ್ಟರು. ಕೆಲ ಮಹಿಳಾ ಸ್ಪರ್ಧಿಗಳು ಕೂಡ ನಿಂದನೀಯ ಭಾಷೆಯನ್ನು ಬಳಸಿದರು. ಹೀಗೆ ವಾಗ್ವಾದ ನಡೆಯಬೇಕಾದರೆ, ಸ್ಪರ್ಧಿ ರಂಜಿತ್ ಅವರು ಹಿಂದಿನಿಂದ ಬಂದು ಜಗದೀಶ್ ಅವರನ್ನು ನೂಕಿದರು. ಬಳಿಕ ಮನೆಯಲ್ಲಿ ಭಾರೀ ಕೋಲಾಹಲವೇ ಉಂಟಾಯಿತು. ಇದನ್ನು ನೋಡಿದ ಬಿಗ್ ಬಾಸ್ ಕೂಡ ಅತಿಯಾದ ಕೋಪದಿಂದ ಯಾರು ತುಟಿಕ್ ಪಿಟಿಕ್ ಅನ್ನುವಂತಿಲ್ಲ ಎಂದು ಗದರಿತು.
ಇದನ್ನು ಓದಿ: ಬೆಂಗಳೂರಿನಲ್ಲಿ ಅ.28ರವರೆಗೂ ರಣಮಳೆ, ಯೆಲ್ಲೋ ಅಲರ್ಟ್..!
ಹೆಣ್ಣು ಮಕ್ಕಳ ಮೇಲಿನ ನಿಂದನೆಯನ್ನು ಬಿಗ್ಬಾಸ್ ಸಹಿಸುವುದಿಲ್ಲ ಎಂದು ಜಗದೀಶ್ ಅವರನ್ನು ಮನೆಯಿಂದ ಹೊರಗಾಕಿತು. ಇತ್ತ ಜಗದೀಶ್ ಅವರನ್ನು ಹೊಡೆಯುವಂತೆ ನೂಕಿದ ರಂಜಿತ್ ಅವರನ್ನೂ ಸಹ ಬಿಗ್ಬಾಸ್ ಮನೆಯಿಂದ ಹೊರಗಾಕಿತು. ಜಗದೀಶ್ ಮನೆಯಿಂದ ಆಚೆ ಹೋಗುವಾಗ ಉಳಿದ ಎಲ್ಲ ಸ್ಪರ್ಧಿಗಳು ಅದನ್ನು ಸಂಭ್ರಮಿಸಿದರು. ಆದರೆ, ರಂಜಿತ್ ಹೋಗುವಾಗ ಬಹುತೇಕರು ಕಣ್ಣೀರು ಸುರಿಸಿದರು. ಈ ಎಲ್ಲ ಬೆಳವಣಿಗೆಯನ್ನು ನೋಡಿದ ಕಿಚ್ಚ ಸುದೀಪ್ ಶನಿವಾರದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಜಗದೀಶ್ ಅವರು ಹೆಣ್ಣು ಮಕ್ಕಳನ್ನು ಬೈದರು ಎಂಬ ಕಾರಣಕ್ಕೆ ಅವರನ್ನು ಮನೆಯಿಂದ ಹೊರಗೆ ಹಾಕಲಾಯಿತು. ಆದರೆ, ನೀವು ಬಳಸಿದ ಕೆಟ್ಟ ಪದಗಳಿಗೆ ಏನು ಮಾಡಬೇಕು ನೀವೇ ಹೇಳಿ. ನೀವು ಕೂಡ ಕಡಿಮೆ ಮಾತನಾಡಿಲ್ಲ ಎಂದರು. ಇದೀಗ ಇದೇ ವಿಚಾರವಾಗಿ ದೊಡ್ಡನೆಯ ಕೆಲ ಸ್ಪರ್ಧಿಗಳು ಸುದೀಪ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಸುದೀಪ್ ಅವರು ಮಾತನಾಡಿದ್ದು ಹೇಗಿತ್ತು ಅಂದರೆ, ಜಗದೀಶ್ ಅವರಿಗೆ ಕ್ಲಿನ್ ಚಿಟ್ ಕೊಟ್ಟಂತೆ ಇತ್ತು. ಸುದೀಪ್ ಸರ್ ಹೇಳಿದ ಆ ಒಂದು ಮಾತನ್ನು ಜನರು ಪರಿಗಣಿಸುವುದಿಲ್ಲ, ನಮ್ಮನೆಲ್ಲ ಉಗಿದರು ಅನ್ನೋದನ್ನು ಮಾತ್ರ ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಹೊರತು ಮಧ್ಯ ಮಧ್ಯದಲ್ಲಿ ಒಂದು ಪದಗಳನ್ನು ಹೇಳಿದರು ಅನ್ನೋದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಚೈತ್ರಾ ಕುಂದಾಪುರ ಬಹಿರಂಗವಾಗಿಯೇ ಮಾನಸ ಮತ್ತು ಅನುಷಾ ಮುಂದೆ ಅಸಮಾಧಾನ ಹೊರಹಾಕಿದರು. ಇದಕ್ಕೆ ಮಾನಸ ಕೂಡ ಧ್ವನಿಗೂಡಿಸಿದರು.
ಕೈ ಮುಗಿದು ಪೂಜಾ ಮಾಡುವ ಕಲ್ಲಿಗೂ ಮತ್ತು ರಸ್ತೆಯಲ್ಲಿ ಎಲ್ಲೋ ಬಿದ್ದಿರುವ ಕಲ್ಲಿಗೂ ವ್ಯತ್ಯಾಸ ಇದೆ. ರಸ್ತೆಯಲ್ಲಿ ಇರುವ ಕಲ್ಲಿಗೆ ಉಗುಳಿದ ಮಾತ್ರಕ್ಕೆ ನಾನು ತಪ್ಪಿತಸ್ಥೆಯಾಗುವುದಿಲ್ಲ. ನಮಗೆ ಮಾತನಾಡಲು ಬಿಟ್ಟರೆ ತಾನೇ ನಾವು ನಮ್ಮ ವಿಚಾರವನ್ನು ಹೇಳಲು ಸಾಧ್ಯ ಇಡೀ ಮನೆಯನ್ನ ವಿಲನ್ ಮಾಡಿ ಜಗದೀಶ್ ವಿಚಾರದಲ್ಲಿ ನೀವು ಮಾಡಿದ್ದು ತಪ್ಪು ಎಂದು ಬಿಂಬಿಸಿದ್ದು ಸರಿ ಇರಲಿಲ್ಲ ಎಂದು ಚೈತ್ರಾ ಕುಂದಾಪುರ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ RCB ಮೇಲೆ ಒತ್ತಡ!
ಚೈತ್ರಾ ಕುಂದಾಪುರ ಅವರ ಈ ಹೇಳಿಕೆಗೆ ನೆಟ್ಟಿಗರು ತೀವ್ರ ಆಕ್ರೋಶ ಕೂಡ ಹೊರಹಾಕಿದ್ದಾರೆ. ಅಷ್ಟು ಉಗಿದು ಬುದ್ದಿ ಹೇಳಿದರು ಇನ್ನೂ ಬುದ್ದಿ ಬಂದಿಲ್ಲ. ನಾನು ಜಗದೀಶ್ ಪರ ಮಾತನಾಡುತ್ತಿಲ್ಲ. ನೀವುಗಳು ಎಷ್ಟು ಸರಿ ಇದ್ದೀರಾ ಅಂತ ತಿಳಿಸುತ್ತಿದ್ದೇನೆ ಎಂದು ಸುದೀಪ್ ಅವರು ಅವತ್ತೇ ಹೇಳಿದ್ದಾರೆ. ಧರ್ಮದ ಹೆಸರಲ್ಲಿ ದುಡ್ಡು ಮಾಡೋರೆಲ್ಲ ಅವರ ಸುದೀಪ್ ಮಾತು ತಪ್ಪು ಅಂತಿದ್ದಾರೆ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಇದೇ ಮೊದಲ ಬಾರಿಗೆ ಸುದೀಪ್ ವಿರುದ್ಧ ಬಿಗ್ಬಾಸ್ನಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಚೈತ್ರಾ ಕುಂದಾಪುರ ಅವರ ಮಾತಿಗೆ ನಟ ಸುದೀಪ್ ಯಾವ ರೀತಿ ಉತ್ತರ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ಸುದೀಪ್ ಅವರು ಮಾತನಾಡುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ತಾಯಿ ಸರೋಜಾ ಅವರು ನಿಧನರಾದ್ದರಿಂದ ಈ ವಾರದ ಕೊನೆಯ ಎಪಿಸೋಡ್ಗೆ ಸುದೀಪ್ ಬರುತ್ತಾರಾ? ಇಲ್ಲವಾ? ಅನ್ನೂ ಪ್ರಶ್ನೆ ಸಹ ಮೂಡಿದೆ. ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ಈ ವಾರದ ಕೊನೆಯವರೆಗೂ ಕಾಯಬೇಕಿದೆ.