ಹಿರೋ’ ಚಿತ್ರದ ನಿರ್ದೇಶಕ ಭರತ್ ರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ‘ಲಾಫಿಂಗ್ ಬುದ್ಧ’ ಕಾಮಿಡಿ ಜಾನರ್ನ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿಗೆ ಜೋಡಿಯಾಗಿ ‘ಇದೊಳ್ಳೆ ರಾಮಾಯಣ’, ‘ಗಂಟುಮೂಟೆ’ ನಟಿ ತೇಜು ಬೆಳವಾಡಿ ನಟಿಸುತ್ತಿದ್ದಾರೆ. ಸಿನಿಮಾದ ಜತೆ ಜತೆಗೆ ರಂಗಭೂಮಿಯಲ್ಲೂ ಸಕ್ರಿಯರಾಗಿರುವ ತೇಜು ಬೆಳವಾಡಿ ‘ಲಾಫಿಂಗ್ ಬುದ್ಧ’ದಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಕುರಿತು, ‘ಈ ಚಿತ್ರದಲ್ಲಿ ಗೋವರ್ಧನನ ಹೆಂಡತಿ ಸತ್ಯವತಿ ಎಂಬ ಪಾತ್ರ ನಿರ್ವಹಿಸಿದ್ದೇನೆ. ಹೆಂಡತಿ ಪತಿಗೆ ಎಷ್ಟು ಸಪೋರ್ಟಿವ್ ಆಗಿರುತ್ತಾರೆ ಎಂಬುದನ್ನು ನನ್ನ ಪಾತ್ರ ಬಿಂಬಿಸುತ್ತದೆ. ಅಲ್ಲದೇ, ಜೀವನದಲ್ಲಿ ಕೊರತೆ ಉಂಟಾದಾಗ ಅದರ ಬೆಲೆ ಗೊತ್ತಾಗುತ್ತದೆ. ಹಾಗಾಗಿ, ಇರುವಾಗಲೇ ಆ ಸಂಬಂಧ, ವ್ಯಕ್ತಿಯನ್ನು ಗೌರವಿಸಬೇಕು ಎಂಬುದನ್ನು ಯಾವುದೇ ಆಡಂಬರ ಇಲ್ಲದೇ ಸಹಜವಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ.
ಹಾಸ್ಯದೊಂದಿಗೆ ಸಂದೇಶ: ‘ಇದೊಳ್ಳೆ ರಾಮಾಯಣ’, ‘ಗಂಟುಮೂಟೆ’ಯಲ್ಲಿ ಕಾಣಿಸಿಕೊಂಡಿದ್ದ ತೇಜು ಬೆಳವಾಡಿ ಆ ಎರಡು ಸಿನಿಮಾಗಳಿಗಿಂತ ‘ಲಾಫಿಂಗ್ ಬುದ್ಧ’ ವಿಭಿನ್ನ ಎನ್ನುತ್ತಾರೆ, ‘ಈ ಚಿತ್ರವು ಹಿಂದಿನ ನನ್ನ ಎರಡು ಚಿತ್ರಗಳಿಗಿಂತ ವಿಭಿನ್ನವಾಗಿದೆ. ಅಲ್ಲಿ ಕಥೆಯೂ ಮಹಿಳಾ ಪಾತ್ರದೊಂದಿಗೆ ಸಾಗಿದರೆ, ಇಲ್ಲಿ ಜನಾರ್ಧನನ ಬದುಕಿನೊಂದಿಗೆ ಸಾಗುತ್ತದೆ. ಹಾಸ್ಯದ ಪಾತ್ರಗಳಲ್ಲಿಯೇ ಸಮಾಜಕ್ಕೆ ಸಂದೇಶ ನೀಡಲಾಗಿದೆ. ಇನ್ನು ಪ್ರಮೋದ್ ಶೆಟ್ಟಿ, ಖಳನಾಯಕನಾಗಿಯೇ ಹೆಚ್ಚು ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ಹಾಸ್ಯಪ್ರವೃತ್ತಿ ಹೆಚ್ಚು ಗಮನಸೆಳೆಯುತ್ತದೆ’ ಎನ್ನುತ್ತಾರೆ.
ತೇಜುವಿನ ರೀ-ಎಂಟ್ರಿ: ಐದು ವರ್ಷಗಳ ಬಳಿಕ ತೇಜು ಬೆಳವಾಡಿ ಮತ್ತೆ ಬೆಳ್ಳಿತೆರೆಗೆ ಬಂದಿದ್ದಾರೆ. ಈ ಬಗ್ಗೆ ”ಗಂಟುಮೂಟೆ’ ತೆರೆಗೆ ಬರುವ ಮುಂಚೆಯೇ ನನಗೆ ಮದುವೆಯಾಗಿತ್ತು. ಸಿನಿಮಾ ಬಿಡುಗಡೆಯಾಗಿ ಸಕ್ಸಸ್ ಕಂಡಿತು. ಆಗ ಕರೊನಾ ಅವಾಂತರ ಸೃಷ್ಟಿಯಾಯಿತು. ಎಲ್ಲವೂ ಸರಿ ಹೋದ ಬಳಿಕ ನನಗೆ ನಾಲ್ಕು-ಐದು ಸ್ಕ್ರಿಪ್ಟ್ಗಳು ಬಂದಿದ್ದವು. ಆದರೆ, ನಾನೇ ಒಪ್ಪಿರಲಿಲ್ಲ. ಕೊನೆಗೆ ಈ ಸ್ಕ್ರಿಪ್ಟ್ ಕೇಳಿದಾಗ, ನನ್ನ ಬದುಕಿಗೆ ಹತ್ತಿರವಾದ ಕಥೆ ಎನಿಸಿತು. ಹಾಗಾಗಿ ಈ ಚಿತ್ರದಲ್ಲಿ ನಟಿಸಿದೆ’ ಎನ್ನುತ್ತಾರೆ. ರೂಪಾ ರಾವ್ ನಿರ್ದೇಶನದ ‘ಅಸ್ಮಿನ್’ ಹಾಗೂ ಆರ್.ಜೆ.ಪ್ರದೀಪ್ ‘ಮರ್ಯಾದೆ ಪ್ರಶ್ನೆ’ ಎರಡು ಸಿನಿಮಾಗಳಲ್ಲಿ ತೇಜು ಬೆಳವಾಡಿ ಕಾಣಿಸಿಕೊಳ್ಳಲಿದ್ದಾರೆ.