ತುಂಬಾ ಹತ್ತಿರದಿಂದ ಮಿಂಚಿನ ಹೊಡೆತ ಎದುರಿಸುವ ವ್ಯಕ್ತಿಗಳಿಗೆ ಅತಿಮಾನುಷ ಶಕ್ತಿಗಳು ಸಿಗುತ್ತವಾ? ವಿದ್ಯುತ್ ಕಾಂತೀಯ ಪ್ರಭಾವಗಳು ಮಾನವನ ಮಿದುಳಿನ ಮೇಲೆ ಪರಿಣಾಮ ಬೀರಬಲ್ಲದೇ? ಈ ಕುರಿತಾಗಿ ಹಲವು ಕುತೂಹಲಕಾರಿ ಪ್ರಶ್ನೆಗಳಿವೆ, ಸಂಶೋಧನೆಗಳೂ ನಡೆದಿವೆ. ಇತ್ತೀಚೆಗೆ ಇದೇ ವಿಚಾರವನ್ನ ಆಧರಿಸಿದ ಮಲಯಾಳಂ ಭಾಷೆಯ ಸಿನಿಮಾವೊಂದು ಭಾರೀ ಸದ್ದು ಮಾಡಿತ್ತು. ಮಿನ್ನಲ್ ಮುರಳಿ ಎಂಬ ಈ ಸೈ-ಫೈ ಸಿನಿಮಾ, ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ, ಈ ಸಿನಿಮಾದ ಕಥೆಯನ್ನೇ ಮೀರಿಸುವ ನಿಜ ಜೀವನದ ಸ್ಟೋರಿಯೊಂದು ದಶಕಗಳ ಹಿಂದೆಯೇ ಅಮೆರಿಕದಲ್ಲಿ ನಡೆದಿತ್ತು. ಆ ನೈಜ ಕಥೆ ನಿಜಕ್ಕೂ ರೋಚಕ, ರೋಮಾಂಚಕ!
ಫೋನ್ ಮೂಲಕ ಬಡಿದಿತ್ತು ಮಿಂಚಿನ ಹೊಡೆತ!
ಸೆಪ್ಟೆಂಬರ್ 17, 1975.. ಡ್ಯಾನಿಯನ್ ಬ್ರಿಂಕ್ಲಿ ಎಂಬಾತ ಲ್ಯಾಂಡ್ ಲೈನ್ ಫೋನ್ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಆಗಸದಲ್ಲಿ ಗುಡುಗು ಹಾಗೂ ಮಿಂಚಿನ ಆರ್ಭಟ ಇತ್ತು. ಈ ಆರ್ಭಟದ ಪರಿಣಾಮ ಡ್ಯಾನಿಯಲ್ಗೂ ತಟ್ಟಿತ್ತು. ಆತನ ಕಿವಿಗೆ ಅಂಟಿಕೊಂಡಿದ್ದ ಫೋನ್ನ ರಿಸೀವರ್ ಮೂಲಕವೇ ಆತನ ಮಿದುಳಿಗೆ ಸಾವಿರಾರು ವ್ಯಾಟ್ ವಿದ್ಯುತ್ ಪ್ರವಾಹವಾಗಿತ್ತು. ಕರೆಂಟ್ ಶಾಕ್ ಹೊಡೆದ ಕೂಡಲೇ ಆತ ಹಲವು ಅಡಿ ದೂರ ಹಾರಿ ಬಿದ್ದಿದ್ದ. ಆತನ ಹೃದಯ ಬಡಿತವೇ ನಿಂತು ಹೋಗಿತ್ತು. ಕ್ಷಣಾರ್ಧದಲ್ಲಿ ಪ್ರಾಣ ಪಕ್ಷಿ ಕೂಡಾ ಹಾರಿ ಹೋಗಿತ್ತು… ಆತನ ಕಥೆಯೇ ಮುಗಿದು ಹೋಯ್ತು ಎಂದು ಕುಟುಂಬದವರು ಭಾವಿಸಿದ್ದರು. ಆದರೆ, ಈತನ ಕಥೆ ಶುರುವಾಗಿದ್ದೇ ಇಲ್ಲಿಂದ!
ಇದನ್ನು ಓದಿ:ಕೃಷ್ಣಂ ಪ್ರಣಯ ಸಖಿ ಫೇಮ್ ಜಸ್ ಕರಣ್ ಸಿಂಗ್ ಕಂಠದಲ್ಲಿ ಎದೆಗಿಳಿದ ‘ಅಂಶು’..!
ಸತ್ತವನು ಮತ್ತೆ ಎದ್ದು ಬಂದ! ಜೊತೆಯಲ್ಲೇ ಅಚ್ಚರಿಗಳ ಮೂಟೆ ಹೊತ್ತು ತಂದ!
ಬರೋಬ್ಬರಿ 28 ನಿಮಿಷಗಳ ಕಾಲ ಆತನ ಹೃದಯ ಬಡಿತ ಇರಲಿಲ್ಲ. ಉಸಿರಾಟವೂ ಇರಲಿಲ್ಲ. ನಿಶ್ಚಲವಾಗಿದ್ದ ಆತ, ದಿಗ್ಗನೆ ಎದ್ದು ಕುಳಿತಿದ್ದ. ಸತ್ತೇ ಹೋದವನು ಮತ್ತೆ ಎದ್ದು ಬಂದ ಎಂದು ಕುಟುಂಬಸ್ಥರು ಸಂಭ್ರಮಿಸುವ ಹೊತ್ತಲ್ಲೇ ಹೊಸ ಅಚ್ಚರಿ ಕಾದಿತ್ತು. ಆತ ಹೊಸ ವ್ಯಕ್ತಿಯಾಗಿ ಮರಳಿ ಬಂದಿದ್ದ! ಆತ ಭವಿಷ್ಯವನ್ನು ಕಂಡವನಾಗಿದ್ದ. ಕೇವಲ 28 ನಿಮಿಷಗಳ ಸಮಾಧಿ ಸ್ಥಿತಿಯಲ್ಲಿ ಆತ ಅಪಾರ ಜ್ಞಾನ ಸಂಪಾದನೆ ಮಾಡಿದ್ದ. ಭವಿಷ್ಯವಾಣಿ ಹೇಳಬಲ್ಲ ಅತಿಮಾನುಷ ಶಕ್ತಿ ಸಂಪಾದನೆ ಮಾಡಿದ್ದ.
117 ಭವಿಷ್ಯವಾಣಿ ನುಡಿದಿದ್ದಾನೆ ಡ್ಯಾನಿಯನ್ ಬ್ರಿಂಕ್ಲಿ!
ಡ್ಯಾನಿಯನ್ ಬ್ರಿಂಕ್ಲಿ ಈವರೆಗೆ 117 ಭವಿಷ್ಯವಾಣಿಗಳನ್ನ ನುಡಿದಿದ್ದಾನೆ. ಈ ಪೈಕಿ 96 ಭವಿಷ್ಯವಾಣಿಗಳು ನಿಜವಾಗಿವೆ. ಆತ ನುಡಿದಿರುವ ಭವಿಷ್ಯವಾಣಿಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿವೆ. ಆತ ಈ ಭೂಮಿಯ ಮೇಲೆ ನಡೆಯುವ ಘಟನೆಗಳನ್ನ ತನ್ನದೇ ಕಣ್ಣಲ್ಲಿ ಪ್ರತ್ಯಕ್ಷವಾಗಿ ಕಂಡಿರುವಂತೆ ಹೇಳಿದ್ದಾನೆ!
ವಿಮಾನಗಳು ದೊಡ್ಡ ದೊಡ್ಡ ಗಗನಚುಂಬಿ ಕಟ್ಟಡಗಳಿಗೆ ಗುದ್ದುತ್ತವೆ. ಕಟ್ಟಡಗಳು ಉರುಳುತ್ತವೆ ಎಂದು ಆತ ಹೇಳಿದ್ದ. ಆದರೆ ಅದು ಯಾವ ಕಟ್ಟಡ, ಯಾವ ಊರು? ಯಾವ ದೇಶ? ಯಾವ ದಿನ ಆ ಘಟನೆ ನಡೆಯುತ್ತೆ? ಹೀಗೆ ಹಲವು ಪ್ರಶ್ನೆಗಳಿಗೆ ಆತನ ಬಳಿ ಉತ್ತರ ಇರಲಿಲ್ಲ. ವಿಮಾನಗಳು ಬೃಹತ್ ಕಟ್ಟಡಗಳಿಗೆ ಡಿಕ್ಕಿ ಹೊಡೆದಾಗ ಆಗಸದವರೆಗೂ ಹೊಗೆ ಏಳುತ್ತದೆ. ಸಾವಿರಾರು ಜನರು ಸಾಯುತ್ತಾರೆ ಎಂದಷ್ಟೇ ಆತನಿಗೆ ಕಂಡಿತ್ತು. 2001ರ ಸೆಪ್ಟೆಂಬರ್ 11 ರಂದು ಅಮೆರಿಕದ ಡಬ್ಲ್ಯೂಟಿಸಿ ಕಟ್ಟಡದ ಮೇಲೆ ಉಗ್ರ ದಾಳಿ ನಡೆದ ಬಳಿಕ ಡ್ಯಾನಿಯನ್ ಬ್ರಿಂಕ್ಲಿ ಹೇಳಿದ್ದು ಇದೇ ಘಟನೆ ಅನ್ನೋ ಸತ್ಯದ ಅರಿವಾಗಿತ್ತು!
ಇದೇ ರೀತಿ ಡ್ಯಾನಿಯನ್ ಬ್ರಿಂಕ್ಲಿ ಹೇಳಿದ ಎಷ್ಟೋ ಭವಿಷ್ಯವಾಣಿಗಳು ಸತ್ಯವಾಗಿವೆ. 1990ರ ಗಲ್ಫ್ ಯುದ್ಧ, 1991ರಲ್ಲಿ ನಡೆದ ಸೋವಿಯತ್ ಒಕ್ಕೂಟದ ಪತನ, 1981ರಲ್ಲಿ ರೊನಾಲ್ಡ್ ರೇಗನ್ ಅಮೆರಿಕ ಅಧ್ಯಕ್ಷರಾಗಿದ್ದು.. ಹೀಗೆ, ಡ್ಯಾನಿಯನ್ ಭವಿಷ್ಯವಾಣಿಗಳು ಸತ್ಯವಾಗಿದ್ದನ್ನು ಹಲವರು ದೃಢೀಕರಿಸಿದ್ದಾರೆ. ಸೇವ್ಡ್ ಬೈ ದಿ ಲೈಟ್ ಎಂಬ ಪುಸ್ತಕವೂ ಪ್ರಕಟವಾಗಿದೆ. ಡ್ಯಾನಿಯನ್ ಬ್ರಿಂಕ್ಲಿ ಹೇಳಿದ ಭವಿಷ್ಯವಾಣಿಗಳನ್ನ ಟೈಮ್ ಮ್ಯಾಗಜೀನ್, ಎನ್ಬಿಸಿ, ಸಿಎನ್ಎನ್ ಹಾಗೂ ಹಲವು ಸ್ವತಂತ್ರ ತನಿಖಾ ಪತ್ರಕರ್ತರು ಪರಿಶೀಲನೆ ನಡೆಸಿ ಖಚಿತಪಡಿಸಿದ್ದಾರೆ. ಡ್ಯಾನಿಯನ್ ಬ್ರಿಂಕ್ಲಿ ಅವರ ಪುಸ್ತಕವು ನ್ಯೂಯಾರ್ಕ್ ಟೈಮ್ಸ್ನ ಬೆಸ್ಟ್ ಸೆಲ್ಲರ್ ಪುಸ್ತಕವಾಗಿಯೂ ಗಮನ ಸೆಳೆದಿದೆ.
ಮುಂದಿನ ದಿನಗಳು ಹೇಗಿರಲಿವೆ? ಡ್ಯಾನಿಯನ್ ಬ್ರಿಂಕ್ಲಿ ಭವಿಷ್ಯವಾಣಿ ಹೇಳೋದೇನು?
ಡ್ಯಾನಿಯನ್ ಬ್ರಿಂಕ್ಲಿ ಪ್ರಕಾರ, ಮುಂದಿನ ದಿನಗಳು ವಿಭಜನಾತ್ಮಕ ಮನಸ್ಥಿತಿಯನ್ನು ಜನರ ಮನಗಳಲ್ಲಿ ಬಿತ್ತಲಿದೆ! ವಿವಿಧ ಸಮುದಾಯಗಳು, ದೇಶಗಳು ಮಾತ್ರವಲ್ಲ, ಕುಟುಂಬಗಳಲ್ಲೇ ವಿಭಜನೆ ಕಾಣಲು ಸಿಗಲಿದೆ. ಸೈದ್ಧಾಂತಿಕವಾಗಿ ಎದುರಾಗುವ ಭಿನ್ನತೆಗಳು ಒಂಟಿತನ, ಸಿಟ್ಟು, ಅಸಹನೆ ಹಾಗೂ ಭೀತಿಯ ವಾತಾವರಣ ಮೂಡಿಸಲಿವೆ. ಪ್ರವಾಹ, ಬಿರುಗಾಳಿ, ಕಾಡ್ಗಿಚ್ಚು, ಬರದ ಜೊತೆಯಲ್ಲೇ ತಂತ್ರಜ್ಞಾನ ಕೂಡ ಶಾಪವಾಗಿ ಕಾಡಲಿದೆ. ಕೃತಕ ಬುದ್ದಿಮತ್ತೆಯಂಥಾ ತಂತ್ರಜ್ಞಾನಗಳು ಮಾನವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನ ತರುವ ಜೊತೆಯಲ್ಲೇ ಋಣಾತ್ಮಕವಾಗಿಯೂ ಕಾಡಲಿವೆ!
ಇದನ್ನು ಓದಿ:ಬೆಳಗ್ಗೆ ಹೋಟೆಲ್, ಸಲೂನ್ ಕಾರ್ಮಿಕರು.. ರಾತ್ರಿಯಾದ್ರೆ ವೆಪನ್ ಡೀಲರ್ಸ್ : ಮಿಷನ್ ಆಪರೇಷನ್ ಈಗಲ್
ಯುದ್ಧ ಭೂಮಿಯಲ್ಲಿ ಯುದ್ಧ ನಡೆಯಲ್ಲ! ಮನಸ್ಸಿನಲ್ಲೇ ನಡೆದು ಹೋಗುತ್ತೆ!
ಸಾಂಪ್ರದಾಯಿಕ ಯುದ್ಧಗಳು ಯುದ್ಧ ಭೂಮಿಯಲ್ಲಿ ನಡೆಯುತ್ತವೆ. ಆದರೆ, ಆಧುನಿಕ ಕಾಲದ ತಂತ್ರಜ್ಞಾನ ಆಧರಿತ ಸಮರಗಳು ಮಾನಸಿಕ ಯುದ್ಧವಾಗಿ ಬದಲಾಗಲಿವೆ. ಸಮುದಾಯಗಳ ನಡುವೆ ಘರ್ಷಣೆ, ಅಪನಂಬಿಕೆಗಳು ಹೆಚ್ಚಲಿವೆ. ಜನರು ನೈಜತೆಯಿಂದ ದೂರವಾಗುತ್ತಾರೆ. ಹೀಗಾಗಿ, ಭವಿಷ್ಯದಲ್ಲಿ ಮನುಕುಲ ಎದುರಿಸಲಿರುವ ಸಮರವು ಬಾಹ್ಯದಲ್ಲಿ ನಡೆಯುವ ಬದಲು ಆಂತರಿಕವಾಗಿ ನಡೆಯಲಿದೆ! ಈ ಸಮರವು ಅತ್ಯಂತ ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣ ಆಗಲಿವೆ.
ಭಯ ಹಾಗೂ ಪ್ರೀತಿಯ ನಡುವಣ ಈ ಸಂಘರ್ಷದಲ್ಲಿ ಪ್ರೀತಿಯೇ ಗೆಲ್ಲಬೇಕಲ್ಲವೇ? ಪ್ರೀತಿಯ ಗೆಲುವಿಗೆ ಪರಸ್ಪರ ಗೌರವ, ದಯೆ, ಸಮಾನತೆ ಹಾಗೂ ಸಹಾನುಭೂತಿಯ ಅಗತ್ಯತೆ ಇದೆ. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಅನ್ನೋದು ಡ್ಯಾನಿಯನ್ ಬ್ರಿಂಕ್ಲಿ ಅವರ ಭವಿಷ್ಯವಾಣಿ. ಇದನ್ನ ಭವಿಷ್ಯವಾಣಿ ಅನ್ನೋದಕ್ಕಿಂತ, ಅವರು ಕಂಡ ಭವಿಷ್ಯದ ಸಮಾಜ ಎನ್ನಬಹುದು. ಆ ಭವಿಷ್ಯದ ಉತ್ತಮ ಸಮಾಜದ ನಿರ್ಮಾಣ ಇಂದಿನಿಂದಲೇ ಆರಂಭವಾಗಲಿ ಅನ್ನೋದು ಡ್ಯಾನಿಯಲ್ ಆಶಯ..