ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರೀಕ್ಷೆಯಂತೆ ಭಾರತ ಹಾಕಿ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಹರ್ಮನ್ಪ್ರೀತ್ ಸಿಂಗ್ ಪಡೆ ದಾಖಲೆಯ 5ನೇ ಬಾರಿಗೆ ಏಷ್ಯನ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ವಾಸ್ತವವಾಗಿ ಈ ಪಂದ್ಯಾವಳಿ ಗೆಲ್ಲುವ ತಂಡಗಳ ಪೈಕಿ ಭಾರತವೇ ಫೇವರೇಟ್ ಆಗಿತ್ತು. ಭಾರತವನ್ನು ಹೊರತುಪಡಿಸಿದರೆ ಪಾಕಿಸ್ತಾನ ತಂಡದತ್ತ ಎಲ್ಲರ ಬೆರಳುಗಳು ಹೋಗುತ್ತಿದ್ದವು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಚೀನಾ ತಂಡದ ವಿರುದ್ಧ ಸೋತ ಪಾಕ್ ತಂಡ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿತ್ತು. ಆದಾಗ್ಯೂ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದ ಪಾಕ್ ತಂಡ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಆದರೆ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವನ್ನು ಸಹಿಸದ ಪಾಕಿಸ್ತಾನದ ಆಟಗಾರರು ಆರಂಭದಿಂದಲೂ ಭಾರತದ ಎದುರಾಳಿಯಾಗಿದ್ದ ಚೀನಾ ತಂಡಕ್ಕೆ ಬೆಂಬಲ ನೀಡಿದ್ದರು. ಇದೀಗ ಅದರ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಚೀನಾದ ಧ್ವಜವನ್ನು ಹಿಡಿದ ಪಾಕ್ ಆಟಗಾರರು
ಮೂರನೇ ಸ್ಥಾನಕ್ಕಾಗಿ ಇಂದು ನಡೆದ ಮೊದಲ ಪಂದ್ಯದಲ್ಲಿ ಕೊರಿಯಾವನ್ನು ಮಣಿಸಿದ್ದ ಪಾಕಿಸ್ತಾನದ ಆಟಗಾರರು, ಆ ಬಳಿಕ ಫೈನಲ್ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಕ್ರೀಡಾಂಗಣದಲ್ಲಿಯೇ ಉಳಿದಿದ್ದರು. ಈ ವೇಳೆ ಪಾಕ್ ತಂಡದ ಭಾಗಶಃ ಆಟಗಾರರ ಕೈಯಲ್ಲಿ ಚೀನಾದ ಧ್ವಜಗಳು ಕಂಡುಬಂದವು. ಹಾಗೆಯೇ ಪಂದ್ಯಕ್ಕೆ ಕೊನೆಯ 10 ನಿಮಿಷಗಳಿರುವಾಗ ಭಾರತ ಗೋಲು ದಾಖಲಿಸಿದ್ದನ್ನು ಸಹಿಸದ ಪಾಕ್ ಆಟಗಾರರು ಸಪ್ಪೆ ಮೊರೆ ಹಾಕಿಕೊಂಡು ಗ್ಯಾಲರಿಯಲ್ಲಿ ಕುಳಿತಿರುವುದು ಕಂಡುಬಂತು.
ಇದೇ ಚೀನಾ, ಪಾಕ್ ಕನಸಿಗೆ ಕೊಳ್ಳಿ ಇಟ್ಟಿತ್ತು
ಕುತೂಹಲಕಾರಿ ಸಂಗತಿಯೆಂದರೆ ಪಾಕಿಸ್ತಾನ ಫೈನಲ್ಗೆ ಹೊಗದಂತೆ ತಡೆದಿದ್ದು ಇದೇ ಚೀನಾ ತಂಡ, ಪೆನಾಲ್ಟಿ ಶೂಟೌಟ್ನಲ್ಲಿ ಪಾಕಿಸ್ತಾನವನ್ನು 2-0 ಗೋಲುಗಳಿಂದ ಸೋಲಿಸಿ ಫೈನಲ್ಗೆ ಅರ್ಹತೆ ಪಡೆದಿತ್ತು. ಆದರೆ ವಿಚಿತ್ರ ಸಂಗತಿಯೆಂದರೆ ಯಾವ ತಂಡ ಸೆಮಿಫೈನಲ್ನಲ್ಲಿ ತನ್ನನ್ನು ಸೋಲಿಸಿ ಪ್ರಶಸ್ತಿ ರೇಸ್ನಿಂದ ಹೊರಹಾಕಿತ್ತೋ ಅದೇ ತಂಡವನ್ನು ಪಾಕಿಸ್ತಾನದ ಆಟಗಾರರು ಬೆಂಬಲಿಸಿದರು.
ಮೂರನೇ ಸ್ಥಾನ ಪಡೆದ ಪಾಕ್
ಇನ್ನು ಕಂಚಿನ ಪದಕಕ್ಕಾಗಿ ಅಂದರೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 5-2 ಗೋಲುಗಳ ಅಂತರದಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ತಂಡದ ಪರ ಸುಫಿಯಾನ್ ಖಾನ್ (38 ನಿಮಿಷ, 49 ನಿಮಿಷ), ಹನ್ನನ್ ಶಾಹಿದ್ (39, 54 ನಿಮಿಷ) ಮತ್ತು ರುಮಾನ್ (45 ನಿಮಿಷ) ಗೋಲು ಗಳಿಸಿದರೆ, ಕೊರಿಯಾ ಪರ ಜಂಗ್ಜುನ್ ಲೀ (16 ನಿಮಿಷ) ಮತ್ತು ಜಿಹುನ್ ಯಾಂಗ್ ಗೋಲು ಗಳಿಸುವಲ್ಲಿ ಯಶಸ್ವಿಯಾಗಿದೆ.