ಆತನ ಹೆಸರು ನೆಪೋಲಿಯನ್. ತಮಿಳು ಸ್ಟಾರ್ ಹೀರೋ. ಮಾಜಿ ಶಾಸಕ, ಮಾಜಿ ಸಂಸದ. ಕೇಂದ್ರದಲ್ಲಿ ಸಚಿವರಾಗಿದ್ದವರು. ಸಾಫ್ಟ್ವೇರ್ ಉದ್ಯಮಿಯೂ ಹೌದು. ಕೋಟಿ ಕೋಟಿ ಆಸ್ತಿ ಇದೆ. ಈಗ ಅವರ ಮಗನ ಮದುವೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದರ ಹಿಂದೊಂದು ಕರುಣಾಜನಕ ಕಥೆ ಇದೆ. ಒಂದಷ್ಟು ಜನ ನೆಪೋಲಿಯನ್ ಅವರನ್ನು, ಅವರ ಮಗನನ್ನು ಟೀಕೆ ಮಾಡ್ತಿದ್ದಾರೆ. ಒಂದಷ್ಟು ಜನ ನೆಪೋಲಿಯನ್ ಅವರ ಸೊಸೆ ಅಕ್ಷಯ ಅವರನ್ನು ಹೊಗಳುತ್ತಿರುವವರೂ ಇದ್ಧಾರೆ. ದುಡ್ಡಿದ್ದರೆ ಹುಡುಗಿಯರು ಎಂಥವರನ್ನೂ ಮದುವೆಯಾಗ್ತಾರೆ ಎಂದು ಟೀಕೆ ಮಾಡುವವರೂ ಇದ್ದಾರೆ. ಇಷ್ಟಕ್ಕೂ ಏನಿದು ಕಥೆ..? ವಿವರ ಇಲ್ಲಿದೆ.
ನೆಪೋಲಿಯನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆ ಇಬ್ಬರು ಮಕ್ಕಳಲ್ಲಿ ಈಗ ಮದುವೆಯಾಗಿರುವ ಧನುಷ್ ಹಿರಿಯ ಮಗ. ಆದರೆ ಈತ ಬೆಳೆಯುತ್ತಾ ಹೋದಂತೆ ಈತನಿಗೆ ಅಪರೂಪದ ಕಾಯಿಲೆಯೊಂದು ಇರುವ ಬಗ್ಗೆ ಗೊತ್ತಾಯಿತು. ಆ ಕಾಯಿಲೆಯ ಹೆಸರು ಸ್ನಾಯು ಕ್ಷಯ. Muscular dystrophy ಅಂತಾ ಹೇಳ್ತಾರೆ. ಅಂದ್ರೆ ಈತನ ಸ್ನಾಯುಗಳು ವಯಸ್ಸಾಗುತ್ತಾ ಆಗುತ್ತಾ ಹೋದಂತೆ ಕ್ಷಯವಾಗುತ್ತಾ, ಕ್ಷೀಣಿಸುತ್ತಾ, ದುರ್ಬಲವಾಗುತ್ತಾ ಹೋಗುತ್ತವೆ. ಈ ಕಾಯಿಲೆಯ ಸ್ಥಿತಿಯಲ್ಲಿರುವ ಧನುಷ್ಗೆ ಈಗ ಕೈಕಾಲು ಎತ್ತುವುದಕ್ಕೂ ಆಗದ ಸ್ಥಿತಿ ಇದೆ.
ಇದನ್ನು ಓದಿ:ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ, ಯುವತಿ ಬದುಕುಳಿದಿದ್ದೇ ಪವಾಡ!
ಈತನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಪತ್ನಿಯೊಂದಿಗೆ ಹೋಗಿರುವ ನೆಪೋಲಿಯನ್ ದಂಪತಿ, ಇವತ್ತಿಗೂ ಅಲ್ಲಿಯೇ ಇದ್ದುಕೊಂಡು ಚಿಕಿತ್ಸೆ ಕೊಡಿಸುತ್ತಲೇ ಇದ್ದಾರೆ. ಕೋಟಿ ಕೋಟಿಗಳು ಖರ್ಚಾಗುತ್ತಿವೆ. ಆದರೆ ಧನುಷ್ ಆರೋಗ್ಯದಲ್ಲಿ ಯಾವ ಚೇತರಿಕೆಯೂ ಆಗಿಲ್ಲ. ಈತನ ಮಲಮೂತ್ರ ವಿಸರ್ಜನೆಯನ್ನೂ ಬೇರೊಬ್ಬರು ಮಾಡಿಸಬೇಕು. ಬಟ್ಟೆಯನ್ನು ತೊಡಿಸಬೇಕು. ಈತನಿಗೆ ಲೈಂಗಿಕ ಶಕ್ತಿಯೂ ಇಲ್ಲ ಎನ್ನಲಾಗುತ್ತಿದೆ. ಹೀಗಿದ್ದರೂ, ತಮ್ಮ ಮಗನಿಗೆ ಮದುವೆ ಮಾಡಬೇಕು ಎಂದು ಆಸೆಪಟ್ಟರು ನೆಪೋಲಿಯನ್. ನೆಪೋಲಿಯನ್ ದಂಪತಿಯ ಈ ಆಸೆಯನ್ನು ಅದೆಷ್ಟು ಜನ ಆಡಿಕೊಂಡರೋ.. ಏನೋ.. ಕೆಲವು ವರ್ಷಗಳ ಪ್ರಯತ್ನದ ಬಳಿಕ ಈತನನ್ನು ಮದುವೆಯಾಗಲು ಅಕ್ಷಯ ಎಂಬ ಹುಡುಗಿ ಮುಂದೆ ಬಂದಳು. ಈಗ ಆಕೆಯ ಜೊತೆ ಧನುಷ್ ಮದುವೆಯಾಗಿದೆ. ಜಪಾನ್ನ ಟೋಕಿಯೋದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಧನುಷ್-ಅಕ್ಷಯ ಸತಿಪತಿಗಳಾಗಿದ್ದಾರೆ. ಈಕೆಯ ತ್ಯಾಗ ಬಲು ದೊಡ್ಡದು ಎಂದಿದ್ದಾರೆ ನೆಪೋಲಿಯನ್.ಭಾವಿ ಸೊಸೆಯನ್ನು ಬಾಯ್ತುಂಬಾ ಹೊಗಳಿದ್ಧಾರೆ.
ಈಗ ಟೀಕೆ ಆಗುತ್ತಿರುವುದು ಇದಕ್ಕೆ. ದೈಹಿಕವಾಗಿ ಯಾವ ಶಕ್ತಿಯೂ ಇಲ್ಲದವನನ್ನು ಈ ಹುಡುಗಿ ಮದುವೆಯಾಗುವುದಕ್ಕೆ ಆತನ ಹೆಸರಲ್ಲಿದ್ದ ಕೋಟಿ ಕೋಟಿ ಆಸ್ತಿಯೇ ಕಾರಣ, ದುಡ್ಡಿದ್ದರೆ ಹುಡುಗಿಯರು ಎಂಥವನನ್ನು ಬೇಕಾದರೂ ಮದುವೆ ಆಗ್ತಾರೆ.. ಎಂದೆಲ್ಲ ಟೀಕೆ ಮಾಡ್ತಿದ್ದಾರೆ. ಹಾಗಂತ ಎಲ್ಲರದ್ದೂ ಟೀಕೆ, ಲೇವಡಿ ಅಲ್ಲ. ಕೆಲವರು ಹೊಗಳಿಯೂ ಇದ್ದಾರೆ. ಎಲ್ಲರೂ ದೈಹಿಕವಾಗಿ ಸರಿ ಇರುವ ವ್ಯಕ್ತಿಯನ್ನಷ್ಟೇ ಮದುವೆ ಆಗುವುದಾಗಿದ್ದರೆ, ಜಗತ್ತಿನ ಕೋಟ್ಯಂತರ ವಿಕಲಚೇತನರು ಮದುವೆಯೇ ಆಗುತ್ತಿರಲಿಲ್ಲ. ಆಕೆಯನ್ನು ಟೀಕೆ ಮಾಡಬೇಡಿ ಎಂದು ಹೇಳುವವರೂ ಇದ್ದಾರೆ.
ಇದನ್ನು ಓದಿ: ರಾಯರ ಮಠದಲ್ಲಿ ಡಾಲಿ ಧನಂಜಯ!
ಹಾಗಂತ ಅಕ್ಷಯ, ಅವಿದ್ಯಾವಂತೆಯೇನಲ್ಲ. ತೀರಾ ಬಡಕುಟುಂಬದವಳೂ ಅಲ್ಲ. ನರ್ಸಿಂಗ್ ಓದಿರುವ ಈಕೆ, ಈಗ ಧನುಷ್ ಅವರನ್ನು ವಿವಾಹವಾಗಿದ್ದಾರೆ.
ಅಂದ ಹಾಗೆ ನೆಪೋಲಿಯನ್ ಕನ್ನಡದಲ್ಲಿಯೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಜಯಸೂರ್ಯ, ಗೌರ್ನಮೆಂಟ್, ಬಿಲ್ಲರಂಗ, ರೌಡಿ ಬ್ರದರ್ಸ್ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದ ಹಾಗೆ ನೆಪೋಲಿಯನ್ ಮಗನ ಈ ಮದುವೆ ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ ಬಂದು ಸೂಪರ್ ಹಿಟ್ ಆದ ಊಪಿರಿ ಚಿತ್ರವನ್ನು ನೆನಪಿಸುತ್ತಿದೆ.