ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯನ್ನು ಇಂಥವರನ್ನೇ ನೋಡಿ ಮಾಡಿರಬೇಕು. ರೈಲ್ವೆ ಇಲಾಖೆಯಿಂದ ಸನ್ಮಾನ ಪಡೆಯುವ ಹುರುಪಿನಲ್ಲಿ ರೈಲ್ವೆ ಸಿಬ್ಬಂದಿಗಳೇ ಹಳಿಯ ಬೋಲ್ಡ್ ಸಡಿಲಗೊಳಿಸಿದ್ದಾರೆ. ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ಘಟನೆ ನಡೆದಿದೆ, ರೈಲ್ವೆ ಸಿಬ್ಬಂದಿ ಹಳಿಗಳನ್ನು ಟ್ಯಾಂಪರಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಸುಭಾಷ್ ಪೊದ್ದಾರ್ (39), ಮನೀಶ್ ಮಿಸ್ತ್ರಿ (28) ಮತ್ತು ಶುಭಂ ಜೈಸ್ವಾಲ್ (26) ಎಂಬ ಮೂವರು ಉದ್ಯೋಗಿಗಳು ರೈಲ್ವೆಯ ನಿರ್ವಹಣಾ ವಿಭಾಗದಲ್ಲಿ ಟ್ರ್ಯಾಕ್ಮೆನ್ಗಳಾಗಿದ್ದು ಮೂವರನ್ನೂ ಬಂಧಿಸಲಾಗಿದೆ.
ರೈಲು ಹಳಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಇಲಾಖೆಯವರಿಗೆ ತಿಳಿಸಿದರೆ ತಮ್ಮನ್ನು ಸನ್ಮಾನಿಸುತ್ತಾರೆ ಎಂದು ಭಾವಿಸಿ ಈ ಕೃತ್ಯವೆಸಗಿದ್ದಾರೆ. ಸೆಪ್ಟೆಂಬರ್ 21 ರಂದು ರೈಲುಗಳನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ ಫಿಶ್ ಪ್ಲೇಟ್ಗಳನ್ನು ತೆಗೆದುಹಾಕಿ ಮತ್ತು ಹಲವಾರು ಬೋಲ್ಟ್ಗಳನ್ನು ಸಡಿಲಗೊಳಿಸಿ ರೈಲ್ವೆ ಹಳಿಯನ್ನು ಹಾಳು ಮಾಡಿದ್ದಾರೆ ಎಂದು ಸೂರತ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.
5.30 ರ ಸುಮಾರಿಗೆ ಆರೋಪಿಗಳು ಘಟನೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸುವ ಮೊದಲು ಚಿತ್ರೀಕರಿಸಿದ ಫೋಟೋಗಳು ಮತ್ತು ವೀಡಿಯೊಗಳ ಸಮಯವನ್ನು ಗಮನಿಸಲಾಗಿದೆ ಎಂದು ಎಸ್ಪಿ ಹೇಳಿದರು, ಸಮಯದ ಅಂತರದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು.
ಮೂವರು ಟ್ರಾಕ್ಮೆನ್ಗಳು ತೀವ್ರ ವಿಚಾರಣೆಯ ನಂತರ ಅಪರಾಧವನ್ನು ಒಪ್ಪಿಕೊಂಡರು. ಮಳೆಗಾಲದ ರಾತ್ರಿ ಡ್ಯೂಟಿ ಮುಗಿಯುವ ಹಂತದಲ್ಲಿದ್ದ ಕಾರಣ ಪೊದ್ದಾರ್ ಅವರು ಈ ಉಪಾಯ ಮಾಡಿದ್ದಾರೆ ಎಂದು ಎಸ್ಪಿ ಜೋಯ್ಸರ್ ಹೇಳಿದ್ದಾರೆ. ಇಲಾಖೆಯಿಂದ ಸನ್ಮಾನ ಸಿಗುವುದು ಹಾಗೂ ರಾತ್ರಿ ಪಾಳಿಯು ಮುಂದುವರೆಯುವುದು ಎನ್ನುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ.
ರಾತ್ರಿ ಪಾಳಿಯಲ್ಲಿರುವವರು ಮರುದಿನ ಒಂದು ದಿನ ರಜೆ ಪಡೆಯುತ್ತಾರೆ ಹೀಗಾಗಿ ಇದೇ ಶಿಫ್ಟ್ನಲ್ಲಿ ಕೆಲಸ ಮಾಡಬೇಕು ಎಂದು ಈ ರೀತಿ ತಪ್ಪು ಹೆಜ್ಜೆ ಇರಿಸಿದ್ದಾರೆ. ಇತ್ತೀಚೆಗೆ ರೈಲು ಹಳಿ ತಪ್ಪಿಸುವ ಯತ್ನ ಬಹಳಷ್ಟು ಕಡೆ ನಡೆಯುತ್ತಿದೆ. ಇದೀಗ ರೈಲ್ವೆ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ, ಉಳಿದ ರೈಲ್ವೆ ಸಿಬ್ಬಂದಿಯ ನಿಷ್ಠೆಗೂ ಕುತ್ತು ಬಂದಿದೆ.