ಕೇಸರಿ ಅತ್ಯಂತ ದುಬಾರಿ ದರದಲ್ಲಿ ಬಿಕರಿಯಾಗುವ ಭಾರತದ ಪದಾರ್ಥ. ಒಂದು ಗ್ರಾಂ ತೂಕಕ್ಕೆ ಇದು ನೂರಾರು ರೂಪಾಯಿಗಳನ್ನು ಬೇಡುತ್ತದೆ. ಈ ಒಂದು ಅದ್ಭುತ ಪದಾರ್ಥದಲ್ಲಿ ಸಾಕಷ್ಟು ಆರೋಗ್ಯಕರ ಗುಣಗಳಿವೆ. ನಿಮ್ಮ ಅಜ್ಜಿ ಅಥವಾ ಮುತ್ತಜ್ಜಿಯ ಮಾತುಗಳನ್ನು ನೀವು ಕೇಳಿದ್ದರೆ ನಮ್ಮ ಅಡುಗೆ ಮನೆ ಕೇವಲ ಅಡುಗೆಗೆ ಎಂದೇ ಮೀಸಲಾದ ಪದಾರ್ಥಗಳಿಂದ ತುಂಬಿರುವುದಿಲ್ಲ. ನೂರಾರು ಸಮಸ್ಯೆಗಳಿಗೆ ಬತ್ತಳಿಕೆಯಲ್ಲಿರುವ ರಾಮಬಾಣದಂತೆ ನಮ್ಮ ಮನೆಯ ಡಬ್ಬಿಗಳಲ್ಲಿ ಅವು ಇರುತ್ತವೆ.
ಈಗಾಗಲೇ ನಾವು ನಿಮಗೆ ಹೇಳಿದಂತೆ ಹಸಿ ಕರಿಬೇವು ತಿನ್ನುವುದರಿಂದ ಕೂದಲು ಆರೋಗ್ಯಕ್ಕೆ ಸಹಾಯಕ. ಬೆಳ್ಳುಳ್ಳಿ ತಿನ್ನುವುದರಿಂದ ಕಫ ಮತ್ತು ಕೆಮ್ಮಿಗೆ ಉಪಯೋಗ ಅಂತ ಹೇಳಿದ್ದಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ದುಬಾರಿ ಪದಾರ್ಥ ಕೇಸರಿಯ ಪ್ರಯೋಜನೆಗಳ ಬಗ್ಗೆ ದೊಡ್ಡ ಚರ್ಚೆಯು ಏರ್ಪಡುತ್ತಿದೆ. ಚರ್ಮದ ಆರೋಗ್ಯಕ್ಕೆ ಈಗ ಕೇಸರಿಯನ್ನು ಬಳಸಲು ಎಲ್ಲರೂ ಹೇಳುತ್ತಿದ್ದಾರೆ.
ಕೇಸರಿಯ ಒಂದೊಂದು ಎಳೆಗಳು ತುಂಬಾ ದುಬಾರಿ ಕ್ರೋಕಸ್ ಸ್ಯಾಟಿವಸ್ ಎಂಬ ಹೂವುಗಳಿಂದ ಇವುಗಳನ್ನು ಆಯ್ದು ತರಲಾಗುತ್ತದೆ. ಒಂದು ಪೌಂಡ್ ಅಂದ್ರೆ 0.453592 ಕಿಲೋ ಗ್ರಾಂ ಕೇಸರಿ ಎಳೆಗಳನ್ನು ರೆಡಿ ಮಾಡಲು 75 ಸಾವಿರ ಹೂವುಗಳನ್ನು ಬೆಳೆಸಬೇಕಾಗುತ್ತದೆ ಅಂದ್ರೆ ಅದರ ಮೌಲ್ಯ ಹಾಗೂ ಮಹತ್ವನ್ನು ನಾವು ಇಲ್ಲಿಯೇ ತಿಳಿಯಬಹುದು. ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಮಸಾಲೆ ಪದಾರ್ಥ.
ವೈದ್ಯರು ಹೇಳುವ ಪ್ರಕಾರ ಈ ಒಂದು ಕೇಸರಿ ಎಂಬ ಮಸಾಲೆ ಪದಾರ್ಥ ತ್ವಚೆಯ ಎಲ್ಲಾ ಸಮಸ್ಯೆಗಳಿಗೂ ರಾಮಬಾಣವಂತೆ. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುವುದರಲ್ಲಿ ಕೇಸರಿಯಂತ ಮತ್ತೊಂದು ಅದ್ಭುತ ಔಷಧಿ ಇಲ್ಲ ಎಂದು ಅನೇಕ ವೈದ್ಯರು ಹೇಳುತ್ತಾರೆ. ಒಣ ಚರ್ಮವನ್ನು ತೇವಾಂಶಗೊಗಳಿಸುವ ಅದ್ಭುತ ಶಕ್ತಿ ಇದೆ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ.
ಗುರುಗ್ರಾಮ್ನ ವಸಿಟ್ರೈನ್ ಕ್ಲಿನಿಕ್ ಚರ್ಮರೋಗ ತಜ್ಞರಾದ ಡಾ. ನಿತಿ ಗೌರ್ ಅವರು ಹೇಳುವ ಪ್ರಕಾರ ಕೇಸರಿಯನ್ನು ಸ್ಕಿನ್ ಲೋಷನ್, ಮಾಶ್ಚುರೈಸರ್ ಹಾಗೂ ಅನೇಕ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ ಎಂದು ಹೇಳಿದ್ದಾರೆ. ಆ್ಯಂಟಿ ಏಜಿಂಗ್ ಉತ್ಪಾದನೆಯಲ್ಲಿಯೂ ಸಹ ಈ ಕೇಸರಿ ಹೆಚ್ಚು ಬಳಕೆಯಾಗುತ್ತದೆ ಎನ್ನಲಾಗಿದೆ.
ಇನ್ನು ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಕೇಸರಿ ನಮ್ಮ ತ್ವಚೆಯನ್ನು ಯುವಿ ರೇಡಿಯೇಷನ್ಗಳಿಂದ ಕಾಪಾಡುತ್ತದೆ. ಇದರಿಂದಾಗಿ ನಾವು ಉರಿಯೂತದಂತಹ ಸಮಸ್ಯೆಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಸಫ್ರಾನ್ ಅಥವಾ ಕೇಸರಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ನಂತಹ ಅಂಶಗಳು ಅತ್ಯಂತ ಹೇರಳವಾಗಿದ್ದು ಇದು ನಿಮ್ಮ ಚರ್ಮವನ್ನು ಅನೇಕ ಸಮಸ್ಯೆಗಳಿಂದ ಕಾಪಾಡುತ್ತದೆ. ಇದು ಉರಿಯೂತ ನಿರೋಧಕವಾಗಿಯೂ ಕೂಡ ಕಾರ್ಯನಿರ್ವಹಿಸುತ್ತದೆ. ಚರ್ಮದಲ್ಲಿ ಕಿರಿಕಿರಿ, ನವೆ, ಮೊಡವೆಗಳು ಇಂತಹ ಸಮಸ್ಯೆಗಳು ನಮಗೆ ಕಾಣ ಸಿಗುವುದಿಲ್ಲ.ಇದು ಮಾತ್ರವಲ್ಲ ಚರ್ಮದ ಮೇಲಿರುವ ಡಾರ್ಕ್ ಸ್ಪಾಟ್ಗಳನ್ನು ಕ್ಲೀಯರ್ ಮಾಡಿ ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿಯೂ ಕೂಡ ಈ ಕೇಸರಿ ಬಹಳ ಸಹಾಯಕಾರಿ.
ಇನ್ನು ಈ ಕೇಸರಿ ಎರಡು ರೂಪಗಳಲ್ಲಿ ಸಿಗುತ್ತದೆ. ಒಣ ಎಳೆಗಳ ರೂಪದಲ್ಲಿ ಹಾಗೂ ಎಣ್ಣೆ ರೂಪದಲ್ಲಿ ಈ ಎರಡರಲ್ಲಿ ಯಾವುದು ಉತ್ತಮ ಅಂತ ನೋಡುವುದಾದ್ರೆ. ಕೇಸರಿ ಎಣ್ಣೆಯೂ ಕೂಡ ಉರಿಯೂತ ನಿರೋಧಕವಾಗಿ ಚರ್ಮ ಕಾಂತಿಯನ್ನು ದ್ವಿಗುಣಗೊಳಿಸುವ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ತಯಾರಿಕೆಯಲ್ಲಿ ಅನೇಕ ರೀತಿಯ ಪ್ರಕ್ರಿಯೆಗಳು ನಡೆಯುತ್ತವೆ. ಹೀಗಾಗಿ ಕೇಸರಿಯ ಒಣ ಎಳೆಗಳು ಎಣ್ಣೆಗೆ ಹೋಲಿಸಿದರೆ ಉತ್ತಮ. ಇವು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಚರ್ಮರೋಗ ತಜ್ಞೆ ಡಾ. ಕೀರ್ತಿ ಹೇಳಿದ್ದಾರೆ.