ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿ ಬೆಂಕಿ, ಬಿರುಗಾಳಿಯೇ ಸೃಷ್ಟಿಯಾಗಿದೆ. ಇಷ್ಟು ದಿನ ಕೋಪ, ತಾಪದಲ್ಲಿದ್ದ ಸ್ಪರ್ಧಿಗಳು ಈಗ ನೀನಾ? ನಾನಾ? ಅನ್ನೋ ಸಮರಕ್ಕೆ ಇಳಿದಿದ್ದಾರೆ. ಜಗದೀಶ್ ಹಾಗೂ ಉಗ್ರಂ ಮಂಜು ಮಧ್ಯೆ ಬಹಳ ದೊಡ್ಡ ವಾಗ್ಯುದ್ಧ ನಡೆದಿದ್ದು ಬಿಗ್ ಬಾಸ್ ಮನೆಯ ಫೈಟ್ಗೆ ಹೊಸ ತಿರುವು ಸಿಕ್ಕಿದೆ. ಜಗದೀಶ್ ಅವರು ಈ ಮೊದಲು ಕೂಡ ಬಿಗ್ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಈಗ ಅವರು ಅಶ್ಲೀಲವಾಗಿ ಮಾತನಾಡಿದ್ದಾರೆ. ಅವರ ಮಾತುಗಳಿಂದ ಇನ್ನುಳಿದ ಸದಸ್ಯರಿಗೆ ಕೋಪ ಬಂದಿದೆ. ಉಗ್ರಂ ಮಂಜು ಅವರು ಉಗ್ರಾವರಾತ ತಾಳಿದ್ದಾರೆ. ರಂಜಿತ್ ಕೂಡ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾರು, ಯಾರನ್ನೂ ನಂಬುವಂತಿಲ್ಲ. ಇಲ್ಲಿ ಸ್ನೇಹ, ವಿಶ್ವಾಸ, ನಂಬಿಕೆಗಳಿಗೆ ಜಾಗವೇ ಇಲ್ಲ. ಸೀಸನ್ 11 ಈಗಾಗಲೇ 2 ವಾರಗಳನ್ನು ಮುಗಿಸಿದ್ದು 3ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಟಾಸ್ಕ್ಗಳಲ್ಲಿ ಗೆಲ್ಲೋದಕ್ಕಿಂತ ಸೀಸನ್ 11ರ ಸ್ಪರ್ಧಿಗಳು ಮಾತಿನ ಯುದ್ಧದಲ್ಲಿ ಗೆಲ್ಲೋ ಪಣತೊಟ್ಟಿದ್ದಾರೆ. ಮಂಗಳವಾರದ ನಿನ್ನೆ ಎಪಿಸೋಡ್ನಲ್ಲಿ ಅವರು ಕೆಲವು ಅಶ್ಲೀಲ ಪದಗಳನ್ನು ಕೂಡ ಬಳಸಿದ್ದಾರೆ. ಕ್ಯಾಮೆರಾ ಮುಂದೆ ನಿಂತು ಅವರು ಕಾರ್ಯಕ್ರಮವನ್ನು ಟೀಕಿಸಿದ್ದಾರೆ. ಅವರು ಹೇಳಿದ ಕೆಲವು ಪದಗಳಿಗೆ ಬೀಪ್ ಹಾಕಲಾಗಿದೆ. ಜಗದೀಶ್ ಇಷ್ಟು ಕೆಟ್ಟದಾಗಿ ಮಾತನಾಡಿದ್ದಕ್ಕೆ ದೊಡ್ಮನೆಯ ಬೇರೆ ಸದಸ್ಯರಿಗೆ ಬೇಸರ ಆಗಿದೆ. ಜಗದೀಶ್ ಎದುರು ರಂಜಿತ್, ಉಗ್ರಂ ಮಂಜು ಅವರು ಉಗ್ರ ರೂಪ ತಾಳಿದ್ದಾರೆ.
ಚೈತ್ರಾ ಜಗದೀಶ್ ಮಾತಿನ ಚಕಮಕಿ ನಡೆಯುವಾಗ, ಚೈತ್ರಾ ಕೊಟ್ಟ ಲುಕ್ಗೆ ಜಗದೀಶ್ ಅಕ್ಷರಶಃ ಗಪ್ಚುಪ್ ಆಗಿಬಿಟ್ಟರು. ಈ ದೃಶ್ಯ ಕಂಡ ಉಗ್ರಂ ಮಂಜು ಚಪ್ಪಾಳೆ ತಟ್ಟಿದರು. ಈ ವೇಳೆ, ‘’ಇದಕ್ಕೆ ಸರಿ ನೀನು, ಇನ್ನೇನಕ್ಕೂ ಲಾಯಕ್ ಇಲ್ಲ’’ ಅಂತ ಜಗದೀಶ್ ಹೇಳಿದಾಗ ಉಗ್ರಂ ಮಂಜು ಚಪ್ಪಲಿ ಎಸೆದರು. ಆಗ, ‘’ಚಪ್ಪಲಿ ನನಗಲ್ಲ ಅದು. ನಿನಗೆ ನೀನೇ ಹೊಡೆದುಕೊಂಡಿದ್ದೀಯಾ’’ ಎಂದರು ಜಗದೀಶ್.
ಜಗದೀಶ್ ವಿರುದ್ಧ ಕೆರಳಿದ ಉಗ್ರಂ ಮಂಜು, ‘’ಹೆಣ್ಮಕ್ಕಳಿಗೆ ಗೌರವ ಕೊಟ್ಟು ಮಾತಾಡದೇ ಇದ್ದವರು ನಮ್ಮ ಹತ್ತಿರ ಮಾತಾಡೋಕೆ ಯೋಗ್ಯತೆನೇ ಇಲ್ಲ’’ ಎಂದರು. ‘’ನನ್ನ ಹುಟ್ಟುಹಬ್ಬದ ದಿನ ಗೌತಮಿನೇ ನನ್ನಾ ತಡೆದಲು. ಇಲ್ಲಾಂದ್ರೆ, ಅವತ್ತೇ ಚಪ್ಪಲಿ ತಗೊಂಡು ಬಿದ್ದಿರೋದು’’ ಅಂತ ಉಗ್ರಂ ಮಂಜು ಹೇಳಿದರು. ಈ ವೇಳೆ ಜಗದೀಶ್ – ಉಗ್ರಂ ಮಂಜು ಮಧ್ಯೆ ಮಾತಿನ ಚಕಮಕಿ ನಡೆಯಿತು.
‘’ಒದೆ ತಿನ್ನೋಕೆ ಕಾಯ್ತಾವ್ನಾ? ಒದೆ ತಿನ್ನಿಸಿಕೊಂಡೇ ಹೋಗ್ತಾನಾ?’’ ಅಂತ ರಂಜಿತ್ ಕೇಳಿದ್ದಕ್ಕೆ, ‘’ಅದೇ ಉದ್ದೇಶ. ನಾವು ಕೈ ಎತ್ತಲಿ ಅನ್ನೋದೇ ಅವರ ಉದ್ದೇಶ’’ ಎಂದರು ಚೈತ್ರಾ ಕುಂದಾಪುರ. ‘’ಕೈ ಎತ್ತಿ, ನಮ್ಮತ್ರ ಹೊಡೆಸಿಕೊಂಡು, ಹೊರಗಡೆ ಹೀರೋ ಆಗೋಕೆ ಪ್ಲಾನ್’’ ಎಂದು ರಂಜಿತ್ ಕಾಮೆಂಟ್ ಮಾಡಿದರು. ಇನ್ನು ಮನೆಯ ಕ್ಯಾಪ್ಟನ್ ಶಿಶಿರ್ ಅವರು ಪರಿಸ್ಥಿತಿ ಸುಧಾರಿಸಲು ಕಷ್ಟಪಟ್ಟರು.