ಬೆಂಗಳೂರಿನಲ್ಲಿ ಸಂಜೆ ಮಳೆ ಆರಂಭವಾಗಿದ್ದು ವಾರಾಂತ್ಯದ ಮೋಜು ಮಸ್ತಿಯನ್ನು ಹೆಚ್ಚಿಸಿದೆ. ಬೆಳಗ್ಗೆಯಿಂದ ಸೂರ್ಯನ ಸುಡು ಬಿಸಿಲು ನೆತ್ತಿ ಸುಡುತ್ತಿದ್ದರೆ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಶುರುವಾಗಿದೆ. ಹೀಗಾಗಿ ವಾರಾಂತ್ಯದ ರಜೆಯನ್ನು ಆನಂದಿಸುತ್ತಿದ್ದ ಸಿಲಿಕಾನ್ ಸಿಟಿ ಮಂದಿಗೆ ಇದು ಮತ್ತಷ್ಟು ಖುಷಿ ತಂದಿದೆ. ನಗರದಲ್ಲಿ ಕಳೆದ ಕೆಲ ದಿನಗಳಿಂದ ಸಂಜೆ ಆದರೆ ಸಾಕು ಧಾರಾಕಾರ ಮಳೆಯಾಗಲು ಆರಂಭವಾಗುತ್ತಿದೆ. ಇಂದು ಕೂಡ ಅಧಿಕ ಮಳೆಯಾಗುತ್ತಿದ್ದು ಭಾನುವಾರವಾದ್ದರಿಂದ ಮಳೆಯನ್ನು ಜನ ಎಂಜಾಯ್ ಮಾಡುತ್ತಿದ್ದಾರೆ. ನಗರದ ಮೆಜೆಸ್ಟಿಕ್, ರಾಜಾಜಿನಗರ, ವಿಜಯನಗರ, ಕೆಆರ್ ಮಾರುಕಟ್ಟೆ, ಗಾಂಧಿ ಬಜಾರ್ ಮತ್ತಿರ ಕಡೆ ಮಳೆ ಜೋರಾಗಿದೆ.
ಇನ್ನೂ ನಾಳೆ ರಕ್ಷಾ ಬಂಧನ ಹಬ್ಬವಾದ್ದರಿಂದ ಜನ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಸಹೋದರನಿಗಾಗಿ ಉಡುಗೊರೆ ಹಾಗೂ ರಾಖಿ ಖರೀದಿಯಲ್ಲಿ ತಲ್ಲೀನರಾಗಿರುವುದು ಕಂಡು ಬಂದಿದೆ. ಹೀಗಾಗಿ ಕೆಲವರಿಗೆ ಮಳೆ ಕಿರಿಕಿರಿಯನ್ನುಂಟು ಮಾಡಿದೆ. ಅಂದಹಾಗೆ ರಾಜ್ಯದಲ್ಲಿ ಎರಡನೇ ಹಂತದ ಮುಂಗಾರು ಪ್ರಾರಂಭವಾಗಿ ಎರಡು ದಿನ ಕಳೆದಿವೆ. ಈಗ ವಿವಿಧೆಡೆ ಮಳೆ ಚುರುಕಾಗಿದೆ. ಕರ್ನಾಟಕದಲ್ಲಿ ಮತ್ತೆ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಇಂದಿನಿಂದ ಆಗಸ್ಟ್ 22ರವರೆಗೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇಂದು ಮತ್ತು ನಾಳೆ ಕರಾವಳಿ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನೂ ಬೆಂಗಳೂರಿನಲ್ಲೂ ಆಗಸ್ಟ್ 22ರವರೆಗೆ ವರುಣನ ಅಬ್ಬರ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಅಗತ್ಯ ಕ್ರಮ ವಹಿಸುವಂತೆ ಪಾಲಿಕೆ ಮತ್ತು ನಗರ ಜಿಲ್ಲಾಡಳಿತಕ್ಕೆ ಹವಾಮಾನ ತಜ್ಞರು ಸೂಚನೆ ಕೊಟ್ಟಿದ್ದಾರೆ.
*18ನೇ ಆಗಸ್ಟ್: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
*19ನೇ ಆಗಸ್ಟ್: ಇನ್ನೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
*20ನೇ ಆಗಸ್ಟ್: ಅಲ್ಲದೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದರೆ, ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.
*21ನೇ ಆಗಸ್ಟ್: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.
*22ನೇ ಆಗಸ್ಟ್: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಮದು ಹವಾಮಾನ ಇಲಾಖೆ ಮುನಸ್ಊಚನೆ ನೀಡಿದೆ.